ADVERTISEMENT

₹ 10 ಲಕ್ಷ ವಂಚನೆ: ಎಸ್‌ಡಿಎ, ಕಂಪ್ಯೂಟರ್ ಆಪರೇಟರ್‌ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 20:19 IST
Last Updated 5 ಜೂನ್ 2023, 20:19 IST
   

ಬೆಂಗಳೂರು: ವೇತನ ಮಂಜೂರು ಸಂದರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹10 ಲಕ್ಷವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಬಿಬಿಎಂಪಿಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಎಂ. ಸುರೇಶ್ ಹಾಗೂ ಕಂಪ್ಯೂಟರ್ ಆಪರೇಟರ್ ಚಂದ್ರಶೇಖರ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘2007ರ ಫೆಬ್ರುವರಿ ಲೆಕ್ಕದಲ್ಲಿ ನಡೆದಿರುವ ವಂಚನೆ ಸಂಬಂಧ ಬಿಬಿಎಂಪಿ ಹಣಕಾಸು ಕಚೇರಿಯ ಸಹಾಯಕ ನಿಯಂತ್ರಕ ಲಕ್ಷ್ಮಯ್ಯ ಅವರು ದೂರು ನೀಡಿದ್ದಾರೆ. ಎಂ. ಸುರೇಶ್ ಹಾಗೂ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರಿಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಪ್ರಕರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳು, ಆರೋಪಿಗಳಿಗೆ ನೋಟಿಸ್ ನೀಡಿ ತನಿಖೆ ನಡೆಸಿದ್ದರು. ವಂಚನೆ ಹಣವನ್ನು ಮರುಪಾವತಿ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ಆರೋಪಿಗಳು ಇದುವರೆಗೂ ಹಣ ವಾಪಸು ಪಾವತಿ ಮಾಡಿಲ್ಲ. ಹೀಗಾಗಿ, ಅಧಿಕಾರಿಗಳು ನ್ಯಾಯಾಲಯದ ನಿರ್ದೇಶನದಂತೆ ಠಾಣೆಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿಗೆ 2007ರ ಫೆಬ್ರುವರಿಯಲ್ಲಿ ₹35.07 ಲಕ್ಷ ವೇತನ ಪಾವತಿ ಮಾಡಲಾಗಿತ್ತು. ಲೆಕ್ಕ ತಪಾಸಣೆ ಸಂದರ್ಭದಲ್ಲಿ, ವೇತನ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ₹ 10 ಲಕ್ಷ ವ್ಯತ್ಯಾಸ ಕಂಡುಬಂದಿತ್ತು. ಹೆಚ್ಚು ಪರಿಶೀಲಿಸಿದಾಗ, ನಕಲಿ ದಾಖಲೆ ಸೃಷ್ಟಿಸಿದ್ದ ಸಂಗತಿ ಗೊತ್ತಾಗಿದೆ’ ಎಂದು ಹೇಳಿದರು.

‘ಆರೋಗ್ಯ ವಿಭಾಗದ ಸಿಬ್ಬಂದಿಗೆ ₹ 25.07 ಲಕ್ಷ ಮಾತ್ರ ವೇತನ ಪಾವತಿಸಬೇಕಿತ್ತು. ಆರೋಪಿಗಳು, ₹ 10 ಲಕ್ಷ ಹೆಚ್ಚುವರಿ ವೇತನಕ್ಕೆ ನಕಲಿ ದಾಖಲೆ ಸೃಷ್ಟಿಸಿದ್ದರು. ನಂತರ, ಹೆಚ್ಚುವರಿ ವೇತನದ ಹಣವನ್ನು ತಮ್ಮ ಸ್ವಂತ ಖಾತೆಗೆ ವರ್ಗಾಯಿಸಿಕೊಂಡಿದ್ದರು’ ಎಂದು ತಿಳಿಸಿದರು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.