ಬೆಂಗಳೂರು: ರಾಜ್ಯದಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು 100 ದಿನದ ಅಭಿಯಾನಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕ ಡಾ. ನವೀನ್ ಭಟ್ ಅವರು ಶನಿವಾರ ಚಾಲನೆ ನೀಡಿದರು.
ಕರ್ನಾಟಕ ಸರ್ಕಾರವು ರಾಷ್ಟ್ರೀಯ ಟಿಬಿ ನಿರ್ಮೂಲನೆ ಕಾರ್ಯಕ್ರಮದಡಿ (ಎನ್‌ಟಿಇಪಿ) ಆಯೋಜಿಸಲಾಗಿರುವ ಅಭಿಯಾನದಲ್ಲಿ ಕ್ಷಯ ರೋಗ (ಟಿಬಿ) ಸಂಬಂಧಿತ ಮರಣವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
‘2025ರ ವೇಳೆಗೆ ‘ಟಿಬಿ-ಮುಕ್ತ ಭಾರತ’ವನ್ನಾಗಿಲು ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಅಪಾಯದ ವ್ಯಕ್ತಿಗಳನ್ನು ಗುರುತಿಸುವುದು, ಸಮಗ್ರ ಆರೈಕೆಯನ್ನು ಒದಗಿಸುವುದು ಮತ್ತು ರಾಜ್ಯದಾದ್ಯಂತ ಸಮುದಾಯ ತೊಡಗಿಸಿಕೊಳ್ಳುವಿಕೆಯನ್ನು ಅಭಿಯಾನದಲ್ಲಿ ಉತ್ತೇಜಿಸಲಾಗುತ್ತದೆ’ ಎಂದು ಹೇಳಿದರು.
ಸಕ್ರಿಯ ಟಿಬಿಯ ಹೆಚ್ಚಿನ ಅಪಾಯವನ್ನು ಹೊಂದಿರುವ ವ್ಯಕ್ತಿಗಳಿಗೆ ‘ಟಿಬಿ ಪ್ರಿವೆಂಟಿವ್ ಥೆರಪಿ’ (ಟಿಪಿಟಿ) ಒದಗಿಸಲು ಅಭಿಯಾನವು ಆದ್ಯತೆ ನೀಡುತ್ತದೆ. ಇದರಿಂದ ಹೊಸ ಪ್ರಕರಣಗಳನ್ನು ತಡೆಗಟ್ಟಲು ಸಹಾಯಕವಾಗಲಿದೆ. ರೋಗಲಕ್ಷಣದ ವ್ಯಕ್ತಿಗಳಿರುವ ಮನೆಗಳು, ಕಾರಾಗೃಹಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ಕೊಳೆಗೇರಿ ಪ್ರದೇಶಗಳು, ಗಣಿಗಾರಿಕೆ ಪ್ರದೇಶಗಳು ಮತ್ತು ಚಹಾ ಅಥವಾ ಕಾಫಿ ಕಾರ್ಖಾನೆಗಳಲ್ಲಿ ತಪಾಸಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಕ್ಷಯರೋಗ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಪವನ್ ಕುಮಾರ್, ಕರ್ನಾಟಕ ಸರ್ಕಾರದ ಕ್ಷಯರೋಗ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಯೋಗಪ್ಪ, ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಸಿರಾಜುದ್ದೀನ್ ಮದನಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.