ADVERTISEMENT

13ರಿಂದ ಆಟೊ ಕಾರ್ ಯಂಗ್ ಡ್ರೈವರ್: 65 ನಗರಗಳಲ್ಲಿ 18 ದಿನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 19:30 IST
Last Updated 10 ಜೂನ್ 2012, 19:30 IST

ಬೆಂಗಳೂರು: ಸುರಕ್ಷಿತ ಕಾರು ಚಾಲನೆ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸಲು ಮಾರುತಿ ಸುಝುಕಿ ಸಂಸ್ಥೆಯು `ಆಟೊ ಕಾರ್ ಯಂಗ್ ಡ್ರೈವರ್~ ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ದೇಶದ ವಿವಿಧ 65 ನಗರಗಳಲ್ಲಿ ಇರುವ 110 ಮಾರುತಿ ವಾಹನ ಚಾಲನಾ ತರಬೇತಿ ಕೇಂದ್ರಗಳಲ್ಲಿ ಈ ತಿಂಗಳ 13ರಿಂದ 30ರವರೆಗೂ ನಡೆಯಲಿದೆ.

ಅಂತಿಮ ಸುತ್ತಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ನವದೆಹಲಿಯ ಅತ್ಯಾಧುನಿಕ ಚಾಲನಾ ಮತ್ತು ಸಂಚಾರ ಸಂಶೋಧನಾ (ಡಿಟಿಆರ್) ಸಂಸ್ಥೆಗೆ ಆಹ್ವಾನಿಸಲಾಗುವುದು. ಸ್ಪರ್ಧೆಯ ವಿಜೇತರು ಮಾರುತಿ ಸುಝುಕಿ ಎ- ಸ್ಟಾರ್ ಅನ್ನು ಬಹುಮಾನವಾಗಿ ಪಡೆಯುವುದರ ಜೊತೆಗೆ ಸಂಸ್ಥೆಯ `ಸೇಫ್ಟಿ ಅಂಬಾಸಡರ್~ ಆಗಿಯೂ ಹೊರ ಹೊಮ್ಮಲಿದ್ದಾರೆ.

ಈ ಸ್ಪರ್ಧೆಯ ಮೂಲಕ ಮಾರುತಿ ಸುಝುಕಿ ಸಂಸ್ಥೆಯು ಯುವಜನರಲ್ಲಿ ಸುರಕ್ಷಿತ ಚಾಲನೆ ಹವ್ಯಾಸ ಮೂಡಿಸುವುದು ಮತ್ತು ರಸ್ತೆಗಳನ್ನು ಸುರಕ್ಷಿತ ತಾಣವಾಗಿಸುವ ಉದ್ದೇಶವನ್ನು ಹೊಂದಿದೆ.

2009ರಲ್ಲಿ ಆರಂಭವಾದ ಈ ಸ್ಪರ್ಧೆಗೆ ದೇಶದಾದ್ಯಂತ ಯುವ ಸಮೂಹದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷ ಸ್ಪರ್ಧೆಗೆ ಎರಡು ಹೊಸ ವರ್ಗವನ್ನು ಸೇರ್ಪಡೆಗೊಳಿಸಿದೆ. ಈ ಪೈಕಿ ಮಹಿಳೆಯರಿಗಾಗಿ ವಿಶೇಷವಾಗಿ ಒಂದು ವರ್ಗ ಇದ್ದರೆ, ಕಾರ್ಪೊರೇಟ್ ವಲಯದ ಯುವ ನೌಕರರಿಗಾಗಿ ಸುರಕ್ಷಿತ ಚಾಲನೆ ಕುರಿತು ಜಾಗೃತಿ ಮೂಡಿಸಲು ಇನ್ನೊಂದು ವರ್ಗ ಇದೆ.

ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಮಾರ್ಕೆಟಿಂಗ್) ಮನೋಹರ್ ಭಟ್ ಮಾತನಾಡಿ, `ಕಳೆದ ಒಂದು ದಶಕದಿಂದ ರಸ್ತೆ ಸುರಕ್ಷತೆ ಮತ್ತು ಸುರಕ್ಷಿತ ವಾಹನ ಚಾಲನೆ ಕುರಿತು ಕಂಪೆನಿಯು ಕಾರ್ಯ ಪ್ರವೃತ್ತವಾಗಿದೆ. ಯುವಜನರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳುವುದು ಸುರಕ್ಷಿತ ಚಾಲನೆ ಹವ್ಯಾಸ ಮೂಡಿಸುವಲ್ಲಿ ಪರಿಣಾಮ ಬೀರಲಿದೆ ಎಂಬುದು ನಮ್ಮ ನಂಬಿಕೆ.  ಯಾವುದೇ ಬದಲಾವಣೆಯಲ್ಲಿ ಯುವಜನರ ಪಾತ್ರ ದೊಡ್ಡದು. ಇಂಥ ಸ್ಪರ್ಧೆಗಳು ಜಾಗೃತಿ ಜೊತೆಗೆ ಚಾಲಕರಿಗೂ ಚಾಲನೆಯ ಉತ್ತಮ ಅನುಭವವನ್ನು ನೀಡಲಿದೆ~ ಎಂದು ಅವರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.