ADVERTISEMENT

1.3 ಟನ್‌ ಪ್ಲಾಸ್ಟಿಕ್‌ ವಶ

ನಿಷೇಧಿತ ಪ್ಲಾಸ್ಟಿಕ್‌ ಮಾರಾಟ l ಮಳಿಗೆಗಳ ಮೇಲೆ ದಿಢೀರ್‌ ದಾಳಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:57 IST
Last Updated 16 ಜುಲೈ 2019, 19:57 IST
   

ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳ ಮೇಲೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಮಂಗಳವಾರವೂ ದಿಢೀರ್‌ ದಾಳಿ ಮುಂದುವರಿಸಿದ್ದು, 1.3 ಟನ್‌ ಪ್ಲಾಸ್ಟಿಕ್‌ ಉತ್ತನ್ನಗಳನ್ನು ವಶಪಡಿಸಿಕೊಂಡರು. ವರ್ತಕರಿಗೆ ಒಟ್ಟು ₹ 4.36 ಲಕ್ಷ ದಂಡ ವಿಧಿಸಿದರು.

ನಿಷೇಧಿತ ಪ್ಲಾಸ್ಟಿಕ್ ಬಳಕೆ ತಡೆಯಲು ಬಿಬಿಎಂಪಿ ಹಮ್ಮಿಕೊಂಡಿರುವ ಆಂದೋಲನದ ಅಂಗವಾಗಿ ಅಧಿಕಾರಿಗಳು ನಗರದ ಎಂಟು ವಲಯಗಳಲ್ಲಿ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿನ ಸಗಟು ವ್ಯಾಪಾರ ಮಳಿಗೆಗಳು ಹಾಗೂ ಅಂಗಡಿಗಳಲ್ಲಿ ದಿಢೀರ್‌ ತಪಾಸಣೆ ನಡೆಸಿದರು. ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೈ ಚೀಲ, ಚಮಚ, ತಟ್ಟೆ ಸೇರಿದಂತೆ ವಿವಿಧ ನಿಷೇಧಿತ ಉತ್ಪನ್ನಗಳನ್ನು ಸ್ವಾಧೀನಪಡಿಸಿಕೊಂಡರು.

‘ದಕ್ಷಿಣ ವಲಯದಲ್ಲಿ ಶ್ರೀನಗರ, ಬನಶಂಕರಿಯ ಬಿಡಿಎ ಸಂಕೀರ್ಣ, ಕೋರಮಂಗಲದ ಕ್ಲಬ್ ರಸ್ತೆ, ಮಡಿವಾಳ ಸಂತೆ, ಜಯನಗರ ಎರಡನೇ ಬ್ಲಾಕ್‌ನ ಮಳಿಗೆಗಳನ್ನು ದಿಢೀರ್‌ ತಪಾಸಣೆ ನಡೆಸಿದ್ದೇವೆ. ಮಹದೇವಪುರ ವಲಯದ ರಾಮಮೂರ್ತಿನಗರ ಮುಖ್ಯರಸ್ತೆ, ಹೊರಮಾವು, ಕಗ್ಗದಾಸಪುರ ಮುಖ್ಯರಸ್ತೆ, ಬೆಳ್ಳಂದೂರು, ದೇವಸಂದ್ರ, ದೊಡ್ಡನೆಕ್ಕುಂದಿ ಹಾಗೂ ವರ್ತೂರು ಮುಖ್ಯರಸ್ತೆಗಳ ಮಳಿಗೆಗಳಿಗೆ ದಾಳಿ ನಡೆಸಿದ್ದೇವೆ. ಪಶ್ಚಿಮ, ಪೂರ್ವ, ಬೊಮ್ಮನಹಳ್ಳಿ ಹಾಗೂ ಆರ್.ಆರ್.ನಗರ ವಲಯಗಳ ವಿವಿಧ ವಾರ್ಡ್‌ಗಳಲ್ಲಿರುವ ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿದೆ’ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ದಾಸರಹಳ್ಳಿ ವಲಯದ ನೆಲಗದರನಹಳ್ಳಿ, ಎಚ್‌ಎಂಟಿ ಬಡಾವಣೆ, ಚೊಕ್ಕಸಂದ್ರ ಹಾಗೂ ಯಲಹಂಕ ವಲಯದ ಅಮೃತನಗರ, ಭದ್ರಪ್ಪ ಲೇಔಟ್, ಕಟ್ಟಿಗೇನಹಳ್ಳಿ, ದೊಡ್ಡಬೊಮ್ಮಸಂದ್ರ ಹಾಗೂ ಪುಟ್ಟೇನಹಳ್ಳಿಗಳಲ್ಲಿರುವ ಮಳಿಗೆಗಳಲ್ಲಿ ತಪಾಸಣೆ ಮಾಡಲಾಗಿದೆ’ ಎಂದರು.

‘ವಶಪಡಿಸಿದ ಪ್ಲಾಸ್ಟಿಕ್ ಕರಗಿಸಿ ಮರುಬಳಕೆ’

‘ಅಂಗಡಿ ಮಳಿಗೆಗಳಲ್ಲಿ ಸ್ವಾಧೀನಪಡಿಸಿಕೊಂಡ ಪ್ಲಾಸ್ಟಿಕ್‌ ಅನ್ನು ಕರಗಿಸಿ ಅದರಿಂದ ಇತರ ಉಪಉತ್ಪನ್ನ ತಯಾರಿಸಲಾಗುತ್ತದೆ’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ವಶಪಡಿಸಿಕೊಂಡ ಪ್ಲಾಸ್ಟಿಕ್‌ ಮತ್ತೆ ಮಳಿಗೆಗಳನ್ನು ಸೇರುತ್ತದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾವುದೇ ಕಾರಣಕ್ಕೂ ಇಂತಹ ಆತಂಕ ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.