ADVERTISEMENT

14 ವರ್ಷಗಳ ನಂತರ ತೆರೆದ ಸಿ.ಎಂ ಕಚೇರಿ ದಕ್ಷಿಣ ಬಾಗಿಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST
ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಅವರ ಕಚೇರಿಯ ದಕ್ಷಿಣದ ಬಾಗಿಲನ್ನು ಹದಿನಾಲ್ಕು ವರ್ಷಗಳ ಬಳಿಕ ಗುರುವಾರ ತೆರೆಯಲಾಯಿತು	- ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಅವರ ಕಚೇರಿಯ ದಕ್ಷಿಣದ ಬಾಗಿಲನ್ನು ಹದಿನಾಲ್ಕು ವರ್ಷಗಳ ಬಳಿಕ ಗುರುವಾರ ತೆರೆಯಲಾಯಿತು - ಪ್ರಜಾವಾಣಿ ಚಿತ್ರ   

ಬೆಂಗಳೂರು:ವಿಧಾನಸೌಧದ 3ನೇ ಮಹಡಿಯಲ್ಲಿನ ಮುಖ್ಯಮಂತ್ರಿಯವರ ಅಧಿಕೃತ ಕಚೇರಿಯ ಮತ್ತೊಂದು (ದಕ್ಷಿಣ ದಿಕ್ಕಿನ) ಬಾಗಿಲನ್ನು ಸುಮಾರು 14 ವರ್ಷಗಳ ನಂತರ ತೆರೆಯಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇದೇ ಬಾಗಿಲ ಮೂಲಕ ಕಚೇರಿ ಪ್ರವೇಶಿಸಿದರು. ಪುನಃ ಅದೇ ಬಾಗಿಲ ಮೂಲಕ ವಿಧಾನಸಭೆ ಅಧಿವೇಶನಕ್ಕೂ ತೆರಳಿದರು.

ಕಚೇರಿಗೆ ಎರಡು ಬಾಗಿಲು ಇರುವುದು ಬೇಡ ಎನ್ನುವ ಕಾರಣಕ್ಕೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದ ನಂತರ ದಕ್ಷಿಣ ದಿಕ್ಕಿಗೆ (ಲಿಫ್ಟ್ ಕಡೆ) ಇದ್ದ ಬಾಗಿಲನ್ನು ಮುಚ್ಚಿಸಿದ್ದರು. ಆ ನಂತರ ಬಂದ ಯಾವ ಮುಖ್ಯಮಂತ್ರಿಯೂ ಅದನ್ನು ತೆಗೆಸುವ ಗೋಜಿಗೆ ಹೋಗಿರಲಿಲ್ಲ. ಬದಲಿಗೆ ಪಶ್ಚಿಮ ದಿಕ್ಕಿನ ಕೊಠಡಿ ಮೂಲಕವೇ ಎಲ್ಲ ಮುಖ್ಯಮಂತ್ರಿಗಳೂ ಹೋಗಿಬರುತ್ತಿದ್ದರು.

ಸಿದ್ದರಾಮಯ್ಯ ಮಂಗಳವಾರ ಬೆಳಿಗ್ಗೆ ಕಚೇರಿಗೆ ತೆರಳಿದಾಗ `ದಕ್ಷಿಣ ಭಾಗದ ಬಾಗಿಲು ಏಕೆ ತೆರೆಯುತ್ತಿಲ್ಲ' ಎಂದು ಸಿಬ್ಬಂದಿಯನ್ನು ವಿಚಾರಿಸಿದರು. ಆಗ ಅವರು `ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿರುವ ತನಕ ಇದೇ ಬಾಗಿಲಲ್ಲಿ ಎಲ್ಲ ಸಿ.ಎಂ.ಗಳೂ ಓಡಾಡುತ್ತಿದ್ದರು. ಅವರ ನಂತರ ಬಂದ ಕೃಷ್ಣ ಅವರು ಈ ಕಚೇರಿಯನ್ನು ಮುಚ್ಚಿಸಿದರು' ಎಂದು ವಿವರಣೆ ನೀಡಿದರು.

ಎಲ್ಲವನ್ನೂ ಕೇಳಿಸಿಕೊಂಡ ಸಿದ್ದರಾಮಯ್ಯ ಅವರು ಬಾಗಿಲು ತೆಗೆಯುವುದಕ್ಕೆ ಸಿಬ್ಬಂದಿಗೆ ಸೂಚಿಸಿದರು. ಅವರೇ ಖುದ್ದು ನಿಂತು ಬಾಗಿಲು ತೆಗೆಸುವ ಪ್ರಯತ್ನವನ್ನೂ ಮಾಡಿದರು. ಆದರೆ, ಮುಚ್ಚಿ 14 ವರ್ಷವಾಗಿದ್ದ ಕಾರಣ ತಕ್ಷಣಕ್ಕೆ ಅದನ್ನು ತೆಗೆಸಲು ಸಾಧ್ಯವಾಗಲಿಲ್ಲ. ಕೊನೆಗೆ ಬಡಗಿಯನ್ನು ಕರೆಸಿ ಬುಧವಾರ ತೆಗೆಸಿದ್ದರು. ಗುರುವಾರ ಮೊದಲ ಬಾರಿಗೆ ದಕ್ಷಿಣದ ಬಾಗಿಲ ಮೂಲಕ ಕಚೇರಿ ಪ್ರವೇಶಿಸಿದರು.

ಹಲವು ವರ್ಷಗಳ ನಂತರ ಬಾಗಿಲು ತೆರೆದ ಕಾರಣಕ್ಕೆ ಅದನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಈ ಬಾಗಿಲ ಮುಂದೆಯೂ ಮುಖ್ಯಮಂತ್ರಿಯವರ ನಾಮಫಲಕ ನೇತು ಹಾಕಲಾಗಿತ್ತು. ಪಶ್ಚಿಮ ದಿಕ್ಕಿನ ಬಾಗಿಲು ಕೂಡ ತೆರೆಯಲಾಗುತ್ತದೆ. ಇದರಲ್ಲಿ ಅಧಿಕಾರಿಗಳು, ಶಾಸಕರು ಮತ್ತು ಸಾರ್ವಜನಿಕರು ಓಡಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.