ADVERTISEMENT

ಸರ್ಜಾಪುರ ರಸ್ತೆ ವಿಸ್ತರಣೆ: 1400 ಮರಗಳಿಗೆ ಕುತ್ತು

ಜನಾಭಿಪ್ರಾಯ ಸಂಗ್ರಹಕ್ಕೆ ಇಂದು ಅರಣ್ಯ ಇಲಾಖೆ ಸಭೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 9:22 IST
Last Updated 14 ಜನವರಿ 2020, 9:22 IST

ಬೆಂಗಳೂರು: ಆನೇಕಲ್‌– ಸರ್ಜಾಪುರ– ವೈಟ್‌ಫೀಲ್ಡ್‌ವರೆಗಿನ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 1400ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ಅರಣ್ಯ ಇಲಾಖೆ ಇದೇ 14ರಂದು ಸಭೆ ಹಮ್ಮಿಕೊಂಡಿದೆ.

ಹಾರೋಹಳ್ಳಿ– ಆನೇಕಲ್‌– ಅತ್ತಿಬೆಲೆ– ಸರ್ಜಾಪುರ– ದೊಮ್ಮಸಂದ್ರ– ಹೋಪ್‌ಫಾರ್ಮ್‌ ರಸ್ತೆಯನ್ನು ಚತುಷ್ಪಥಗೊಳಿಸಲಾಗುತ್ತಿದೆ.

‘ಆನೇಕಲ್‌ ಸಮೀಪದ ಬೆಸ್ತಮಾನಹಳ್ಳಿಯಿಂದ ಹೋಪ್‌ಫಾರ್ಮ್‌ವರೆಗಿನ 25 ಕಿ.ಮೀ ಉದ್ದದ ರಸ್ತೆ ಬೆಂಗಳೂರು ದಕ್ಷಿಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ಈ ರಸ್ತೆ ಅಭಿವೃದ್ಧಿಗೆ 1,400 ಮರಗಳನ್ನು ತೆರವುಗೊಳಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಅನುಮತಿ ಕೋರಿದೆ. ಈ ಸಲುವಾಗಿ ನಾವು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅತ್ತಿಬೆಲೆಯ ಪ್ರಾದೇಶಿಕ ಸಾರಿಗೆ ಕಚೇರಿಯ ಬಳಿ ಬೆಳಿಗ್ಗೆ 11ಕ್ಕೆ ಸಭೆ ಆರಂಭವಾಗಲಿದೆ. ಈ ರಸ್ತೆ ವಿಸ್ತರಣೆ ಸಲುವಾಗಿ ಮರಗಳನ್ನು ಕಡಿಯುವ ಕುರಿತು ಸಾರ್ವಜನಿಕರು ಈ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಹುದು’ ಎಂದರು.

‘ನಗರದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಸಾಕಷ್ಟು ಹಸಿರನ್ನು ಕಳೆದುಕೊಂಡಿದ್ದೇವೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ 100 ವರ್ಷ ಹಳೆಯ ಮರಗಳನ್ನೂ ಕಡಿಯಲಾಗುತ್ತಿದೆ. ಸಾಧ್ಯವಾದಷ್ಟು ಹೆಚ್ಚು ಜನರು ಈ ಸಭೆಯಲ್ಲಿ ಭಾಗವಹಿಸುವ ಮೂಲಕ ಹಸಿರನ್ನು ಉಳಿಸಿಕೊಳ್ಳುವಂತೆ ಒತ್ತಡ ಹೇರಬೇಕು’ ಎಂದು ಪರಿಸರ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.