ADVERTISEMENT

‘ತಾಮ್ರದ ಚೆಂಬು’ ವಂಚನೆ: ₹ 15 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 19:45 IST
Last Updated 5 ಫೆಬ್ರುವರಿ 2022, 19:45 IST

ಬೆಂಗಳೂರು: ‘ತಾಮ್ರದ ಚೆಂಬು’ ತೋರಿಸಿ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಇಬ್ಬರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದು, ಅವರಿಂದ ₹ 15 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

‘ನಾರಾಯಣ ಹಾಗೂ ವಿಘ್ನೇಶ್ ಬಂಧಿತರು. ವಂಚನೆ ಬಗ್ಗೆ ನಗರದ ಉದ್ಯಮಿಯೊಬ್ಬರು ನೀಡಿದ್ದ ದೂರು
ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

'ತಾಮ್ರದ ಚೆಂಬು ಸಮೇತ ಜ. 3ರಂದು ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಬಳಿ ಉದ್ಯಮಿ ಹಾಗೂ ಅವರ ಸ್ನೇಹಿತರನ್ನು ಭೇಟಿಯಾಗಿದ್ದರು. ‘ಸಿಡಿಲು ಬಡಿದಿರುವ ಪುರಾತನ ತಾಮ್ರದ ಚೆಂಬು ಇದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಂತರ
ರೂಪಾಯಿ ಬೆಲೆ ಇದೆ’ ಎಂಬುದಾಗಿ ಹೇಳಿದ್ದರು.’

ADVERTISEMENT

‘ಅಮೆರಿಕದ ನಾಸಾ ಹಾಗೂ ಜಪಾನ್‌ನ ಜಾಕ್ಸಾ ಕಂಪನಿಯವರು ಕೋಟ್ಯಂತರ ರೂಪಾಯಿಗೆ ಚೆಂಬು ಖರೀದಿಸುತ್ತಾರೆ. ಅದಕ್ಕೂ ಮುನ್ನ ಕೆಲ ಪರೀಕ್ಷೆಗಳನ್ನು ಮಾಡಿಸಬೇಕು. ಅದಕ್ಕೆ ಹಣ ಖರ್ಚಾಗುತ್ತದೆ. ನೀವು ₹ 1 ಕೋಟಿ ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ನಿಮಗೆ ₹ 5 ಕೋಟಿ ಮರಳಿ ಕೊಡುತ್ತೇವೆ’ ಎಂಬುದಾಗಿ ಆರೋಪಿಗಳು ತಿಳಿಸಿದ್ದರು. ಅದನ್ನು ನಂಬಿದ್ದ ಉದ್ಯಮಿ, ₹ 48 ಲಕ್ಷ ನೀಡಿದ್ದರು.’

‘ಹಣ ಪಡೆದ ನಂತರ ನಾಪತ್ತೆಯಾಗಿದ್ದ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಆರೋಪಿಗಳದ್ದು ವಂಚನೆ ಜಾಲವೆಂಬುದು ತಿಳಿಯುತ್ತಿದ್ದಂತೆ ಉದ್ಯಮಿ ಠಾಣೆಗೆ ದೂರು ನೀಡಿದ್ದರು’ ಎಂದೂ ಪೊಲೀಸರು ವಿವರಿಸಿದರು.

‘ಐಷಾರಾಮಿ ಜೀವನಕ್ಕೆ ಹಣ ಹೊಂದಿಸಲು ಕೃತ್ಯ ಎಸಗಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.