ಬೆಂಗಳೂರು: ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅಧ್ಯಕ್ಷತೆಯಲ್ಲಿ ಇದೇ 16ರಂದು ನಗರದಲ್ಲಿ ನಡೆಯಲಿರುವ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಸಾರಿಗೆ, ತೆರಿಗೆ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಎನ್.ಕಿರಣ್‌ಕುಮಾರ್ ರೆಡ್ಡಿ (ಆಂಧ್ರ), ಉಮ್ಮನ್ ಚಾಂಡಿ (ಕೇರಳ), ಜೆ.ಜಯಲಲಿತಾ (ತಮಿಳುನಾಡು) ಮತ್ತು ಎನ್.ರಂಗಸ್ವಾಮಿ (ಪುದುಚೇರಿ) ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಹಿಂದೆ ಪುದುಚೇರಿ ಮತ್ತು ಹೈದರಾಬಾದ್‌ನಲ್ಲಿ ನಡೆದ ಸಭೆಯ ಶಿಫಾರಸುಗಳ ಅನುಷ್ಠಾನ ಕುರಿತು ಈ ಸಭೆಯಲ್ಲಿ ಅವಲೋಕನ ನಡೆಯಲಿದೆ. ಅಲ್ಲದೇ ಗ್ರಾಮೀಣಾಭಿವೃದ್ಧಿ, ಬಡತನ ನಿರ್ಮೂಲನೆ ಮೊದಲಾದ ಯೋಜನೆಗಳಿಗೆ ಕೇಂದ್ರದಿಂದ ಹಂಚಿಕೆಯಾಗಿರುವ ಅನುದಾನದ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಯಲಿದೆ.
ಪೊಲೀಸ್ ವ್ಯವಸ್ಥೆಯ ಸುಧಾರಣೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಸ್ಥಿತಿಗತಿ, ಮಂಗಳೂರು - ಉಡುಪಿ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ವಿಸ್ತರಣೆ, ಕರಾವಳಿ ಪ್ರದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ, ಪ್ರವಾಸೋದ್ಯಮ, ಮೀನುಗಾರಿಕೆಗೆ ಪ್ರೋತ್ಸಾಹ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.