ADVERTISEMENT

ಅಕ್ರಮ ಲೈವ್‌ಬ್ಯಾಂಡ್; 17 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 18:59 IST
Last Updated 23 ಮಾರ್ಚ್ 2019, 18:59 IST
ರೆಸ್ಟೋರೆಂಟ್‌ನ ವ್ಯವಸ್ಥಾಪಕರು
ರೆಸ್ಟೋರೆಂಟ್‌ನ ವ್ಯವಸ್ಥಾಪಕರು   

ಬೆಂಗಳೂರು: ರೆಸ್ಟೋರೆಂಟ್ ಹೆಸರಿನಲ್ಲಿ ಲೈವ್ ಬ್ಯಾಂಡ್ ನಡೆಸುತ್ತಿದ್ದ ಪ್ಯಾಲೇಸ್ ಗುಟ್ಟಹಳ್ಳಿ ಸಮೀಪದ ವಿನಾಯಕ ವೃತ್ತದ ‘ಶ್ರೀನಿವಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ (ಆರೆಂಜ್)’ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, 17 ಮಂದಿಯನ್ನು ಬಂಧಿಸಿದ್ದಾರೆ.

ಬಾರ್ ವ್ಯವಸ್ಥಾಪಕರಾದ ಬಂಟ್ವಾಳ ತಾಲ್ಲೂಕಿನ ಸಂತೋಷ್ (33), ಉಮೇಶ್ (33), ರಮೇಶ್ (31), ಮಂಡ್ಯ ಜಿಲ್ಲೆಯ ಅಭಿಷೇಕ್ ಅಲಿಯಾಸ್ ಅಭಿ (28) ಹಾಗೂ 13 ಗ್ರಾಹಕರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ₹ 1.31 ಲಕ್ಷ ನಗದು, 19 ಮೊಬೈಲ್‌ಗಳು ಹಾಗೂ ₹ 2.50 ಲಕ್ಷ ಮೌಲ್ಯದ ಸಂಗೀತ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

‘ದಾಳಿ ವೇಳೆ ಲೈವ್‌ಬ್ಯಾಂಡ್ ಮಾಲೀಕ ವೆಂಕಟೇಶ್ ತಲೆಮರೆಸಿಕೊಂಡಿದ್ದಾನೆ. ಅಲ್ಲಿ ನೃತ್ಯ ಮಾಡುತ್ತಿದ್ದ ದೆಹಲಿಯ ಹತ್ತು ಯುವತಿಯರನ್ನು ವಶಕ್ಕೆ ಪಡೆದು, ಬುದ್ಧಿ ಹೇಳಿ ಬಿಟ್ಟು ಕಳುಹಿಸಲಾಗಿದೆ’ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

ADVERTISEMENT

‘ಉತ್ತಮ ಕೆಲಸ ಕೊಡಿಸುವುದಾಗಿ ಯುವತಿಯರನ್ನು ನಗರಕ್ಕೆ ಕರೆಸಿಕೊಂಡಿದ್ದ ಮಾಲೀಕರು, ಅವರ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ಗ್ರಾಹಕರನ್ನು ಯುವತಿಯರ ಹತ್ತಿರಕ್ಕೆ ಹೋಗಲು ಬಿಟ್ಟು, ಅವರ ಮೇಲೆ ನೋಟುಗಳನ್ನು ಎಸೆಯಲು ಪ್ರಚೋದಿಸುತ್ತಿದ್ದರು. ಈ ಮೂಲಕ ಅಕ್ರಮ ಸಂಪಾದನೆಗೆ ಇಳಿದಿದ್ದರು. ಬಂಧಿತರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗ್ರಾಹಕರ ಪೂರ್ವಾಪರ ಕಲೆಹಾಕಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.