ADVERTISEMENT

18ರಂದು ದೆಹಲಿಗೆ ಸರ್ವಪಕ್ಷ ನಿಯೋಗ:ಸಿ.ಎಂ

ಕಾವೇರಿ ಐತೀರ್ಪಿನ ಅಧಿಸೂಚನೆ ಪ್ರಕಟಿಸದಂತೆ ಪ್ರಧಾನಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2013, 19:59 IST
Last Updated 13 ಫೆಬ್ರುವರಿ 2013, 19:59 IST
ಶೆಟ್ಟರ್
ಶೆಟ್ಟರ್   

ಬೆಂಗಳೂರು: ಕಾವೇರಿ ನ್ಯಾಯಮಂಡಳಿ ಐತೀರ್ಪಿನ ಅಧಿಸೂಚನೆ ಪ್ರಕಟಿಸದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಒತ್ತಡ ತರುವ ಉದ್ದೇಶದಿಂದ ಇದೇ 18ರಂದು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸಭೆಯಲ್ಲಿ ತಿಳಿಸಿದರು.

ಇದೇ 8ರಂದು ನಡೆದ ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆಯಲ್ಲಿ ಸರ್ವಪಕ್ಷಗಳ ನಿಯೋಗ ತೆರಳುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪ್ರಧಾನಿ ಅವರು 18ರಂದು ಭೇಟಿ ಮಾಡಲು ಕಾಲಾವಕಾಶ ನೀಡಿದ್ದಾರೆ ಎಂದರು.

ನಿಯೋಗ ತೆಗೆದುಕೊಂಡು ಹೋಗಿ ಒತ್ತಡ ಹೇರುವಂತೆ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಜೆಡಿಎಸ್‌ನ ಎಚ್.ಡಿ.ರೇವಣ್ಣ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಶೆಟ್ಟರ್, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ವಾಸ್ತವಾಂಶ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರೂ ನಿಯೋಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದೆಯೂ ಪ್ರಧಾನಿ ಅವರ ಭೇಟಿಗೆ ಪ್ರಯತ್ನಿಸಲಾಗಿತ್ತು. ಆದರೆ, ಕಾಲಾವಕಾಶ ದೊರೆತಿರಲಿಲ್ಲ ಎಂದು ಶೆಟ್ಟರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಪ್ರಧಾನಿ ಮನೆ ಮುಂದೆ ಧರಣಿ ಮಾಡಬೇಕಾಗಿತ್ತು ಎಂದರು. ತಮಿಳುನಾಡು ಸರ್ಕಾರ ಕೇಂದ್ರದ ಮೇಲೆ ಪ್ರತಿದಿನ ಒತ್ತಡ ಹೇರುತ್ತಿದೆ. ಕಾವೇರಿ ನ್ಯಾಯಮಂಡಳಿ ಐತೀರ್ಪು ಬಂದ ಬಳಿಕ, ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕರ್ನಾಟಕ ಎರಡು ಮಧ್ಯಂತರ ಅರ್ಜಿಗಳನ್ನು ನ್ಯಾಯಮಂಡಳಿಗೆ ಸಲ್ಲಿಸಿದೆ. ಅವುಗಳು ಇತ್ಯರ್ಥವಾಗುವ ಮೊದಲೇ ಅಧಿಸೂಚನೆ ಹೊರಬಿದ್ದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು ರೇವಣ್ಣ ಆತಂಕ ವ್ಯಕ್ತಪಡಿಸಿದರು.

ಮಧ್ಯಂತರ ಅರ್ಜಿ ಇತ್ಯರ್ಥವಾಗದೆ ಇರುವುದರಿಂದ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ ಅವರು ನ್ಯಾಯಾಲಯಕ್ಕೆ ತಿಳಿಸಬೇಕಾಗಿತ್ತು. ಇದರಲ್ಲಿ ಕೇಂದ್ರದ ವೈಫಲ್ಯವೂ ಇದೆ ಎಂದು ದೂರಿದರು.

ನಿಯೋಗ ಹೋದರೆ ಪ್ರಯೋಜನವಿಲ್ಲ, ಒತ್ತಡ ಹೇರುವ ತಂತ್ರಗಳನ್ನು ಅನುಸರಿಸಬೇಕು ಎಂದು ಜೆಡಿಎಸ್‌ನ ಎಚ್.ಸಿ.ಬಾಲಕೃಷ್ಣ ಆಗ್ರಹಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, `ಒಮ್ಮೆ ಹೋಗೋಣ ಎನ್ನುತ್ತೀರಿ, ಮತ್ತೊಮ್ಮೆ ಏನು ಪ್ರಯೋಜನ ಎನ್ನುತ್ತೀರಿ. ನಿಮ್ಮಲ್ಲೇ ಸ್ಪಷ್ಟತೆ ಇಲ್ಲ' ಎಂದು ಚುಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.