ADVERTISEMENT

₹ 1.95 ಕೋಟಿ ಮೊತ್ತದ ನೋಟುಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:33 IST
Last Updated 24 ಫೆಬ್ರುವರಿ 2018, 19:33 IST

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸೈಯದ್ ಸಮೀರ್ ಎಂಬುವವರ ಫ್ಲ್ಯಾಟ್ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಕೊತ್ತನೂರು ಪೊಲೀಸರು, ₹1.95 ಕೋಟಿ ಮೊತ್ತದ ₹500 ಹಾಗೂ ₹1,000 ಮುಖಬೆಲೆಯ ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಸಮೀರ್, ಕೊತ್ತನೂರಿನ ‘ಗೋಲ್ಡನ್ ಪಾಮ್’ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ. ಆತ ನೋಟು ಬದಲಾವಣೆ ದಂಧೆಯಲ್ಲಿ ತೊಡಗಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತು. ಕೂಡಲೇ ಫ್ಲ್ಯಾಟ್ ಮೇಲೆ ದಾಳಿ ನಡೆಸಿದೆವು. ಈ ವೇಳೆ ಸಮೀರ್ ತಪ್ಪಿಸಿಕೊಂಡಿದ್ದು, ಆತನ ಸಹಚರರಾದ ಮಾರತ್ತಹಳ್ಳಿಯ ಜೈಕುಮಾರ್ (32), ಹೊಸಕೋಟೆಯ ಶಶಿ (26) ಹಾಗೂ ಮಂಗಳೂರಿನ ಶರತ್ (28) ಸಿಕ್ಕಿಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಕೆಲ ದಿನಗಳ ಹಿಂದೆ ನಮ್ಮನ್ನು ಸಂಪರ್ಕಿಸಿದ್ದ ವ್ಯಾಪಾರಿಯೊಬ್ಬರು, ‘ನಿಮ್ಮ ಬಳಿ ಹಳೇ ನೋಟುಗಳಿದ್ದರೆ ನಾನು ಖರೀದಿಸುತ್ತೇನೆ’ ಎಂದಿದ್ದರು. ಹೀಗಾಗಿ ಸ್ನೇಹಿತರು ಹಾಗೂ ಸಂಬಂಧಿಗಳ ಬಳಿ ಇದ್ದ ಹಳೇ ನೋಟುಗಳನ್ನು ಸಂಗ್ರಹಿಸಿ ಸಮೀರ್ ಮನೆಯಲ್ಲಿ ಇಟ್ಟಿದ್ದೆವು. ಆ ವ್ಯಾಪಾರಿ ರಾತ್ರಿ 9.30ರ ಸುಮಾರಿಗೆ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದರು. ಅಷ್ಟರಲ್ಲಿ ಪೊಲೀಸರು ಬಂದುಬಿಟ್ಟರು’ ಎಂದು ಬಂಧಿತರು ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಸಮೀರ್, ವ್ಯಾಪಾರಿ ಹಾಗೂ ಮಧ್ಯವರ್ತಿ ಬಂಧನಕ್ಕೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ. ನೋಟು ಬದಲಾವಣೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಈಗಾಗಲೇ ಮುಗಿದು ಹೋಗಿದೆ. ಹೀಗಿದ್ದರೂ, ಆ ವ್ಯಾಪಾರಿ ಯಾವ ಉದ್ದೇಶಕ್ಕೆ ಹಳೇ ನೋಟುಗಳನ್ನು ಖರೀದಿಸುವುದಾಗಿ ಹೇಳಿದ್ದ ಎಂಬುದು ಗೊತ್ತಾಗಿಲ್ಲ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಎಸ್.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.