ಬೆಂಗಳೂರು: ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗಿನ ಎರಡನೇ ಸುರಂಗದ ನಿರ್ಮಾಣ ಕಾರ್ಯವು ಗುರುವಾರ ಸಂಜೆ ಪೂರ್ಣಗೊಂಡಿತು. ಇದರೊಂದಿಗೆ 925 ಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವು ಸಿದ್ಧವಾದಂತಾಗಿದೆ. ರಾಜಧಾನಿಯ ಪ್ರಪ್ರಥಮ ಜೋಡಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕೆಂಪೇಗೌಡ ರಸ್ತೆಯ ಕೆಳಗೆ ಸುರಂಗ ಕೊರೆಯುತ್ತಿದ್ದ `ಮಾರ್ಗರಿಟಾ~ ಹೆಸರಿನ ಟನೆಲ್ ಬೋರಿಂಗ್ ಮೆಷಿನ್ (ಟಿಬಿಎಂ) ಗುರುವಾರ ಸಂಜೆ 4.40ಕ್ಕೆ ಸೆಂಟ್ರಲ್ ಕಾಲೇಜಿನ ಬಳಿ ನಿರ್ಮಾಣ ಹಂತದಲ್ಲಿರುವ ನೆಲದಡಿಯ ನಿಲ್ದಾಣವನ್ನು ಪ್ರವೇಶಿಸಿತು. ಈ ಯಂತ್ರವು ಆಗಸ್ಟ್ 15ರ ನಂತರ ಸುರಂಗ ಕೊರೆಯುವ ಕಾರ್ಯವನ್ನು ಪ್ರಾರಂಭಿಸಿತ್ತು.
ಒಂದನೇ ಸುರಂಗ ಕೊರೆದ `ಹೆಲೆನ್~ ಹೆಸರಿನ ಟಿಬಿಎಂ ಶನಿವಾರ (ಮಾ. 3) ಬೆಳಿಗ್ಗೆ 11ರ ವೇಳೆಗೆ ಸೆಂಟ್ರಲ್ ಕಾಲೇಜಿನ ನಿಲ್ದಾಣವನ್ನು ಬಂದು ಸೇರಿತ್ತು. ಈ ಯಂತ್ರವು ಜೂನ್‌ನಿಂದ ಕೊರೆಯುವ ಕಾರ್ಯ ಪ್ರಾರಂಭಿಸಿತ್ತು.
ಹೆಲೆನ್ ಮತ್ತು ಮಾರ್ಗರಿಟಾ ಟಿಬಿಎಂಗಳನ್ನು ನಿಲ್ದಾಣದ ಇನ್ನೊಂದು ಬದಿಯಲ್ಲಿ ಇರಿಸಿ ವಿಧಾನಸೌಧದೆಡೆಗೆ ಸುರಂಗ ನಿರ್ಮಿಸುವ ಕಾರ್ಯ ಎರಡು ತಿಂಗಳ ನಂತರ ಪ್ರಾರಂಭವಾಗುವ ಸಾಧ್ಯತೆ ಇದೆ.
ಈ ಎರಡು ದೈತ್ಯ ಯಂತ್ರಗಳನ್ನು ಬಿಚ್ಚಿ, ಅದರ ಬಿಡಿಭಾಗಗಳನ್ನು ಮತ್ತೆ ಜೋಡಿಸುವ ಕಾರ್ಯಕ್ಕೆ ಕನಿಷ್ಠ 45 ದಿನಗಳ ಕಾಲಾವಕಾಶ ಬೇಕಾಗಲಿದೆ.
ಈಗ ಸಂಪೂರ್ಣಗೊಂಡಿರುವ ಜೋಡಿ ಸುರಂಗ ಮಾರ್ಗದಲ್ಲಿ ಹಳಿ, ವಿದ್ಯುತ್ ಪ್ರವಹಿಸುವ 3ನೇ ಹಳಿ ಅಳವಡಿಸುವ ಕಾರ್ಯವನ್ನು ಕೈಗೊಳ್ಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.