ADVERTISEMENT

2ನೇ ಹಂತದ ಒಪ್ಪಿಗೆ ನಂತರ ವಿಸ್ತರಣೆ

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:38 IST
Last Updated 5 ಡಿಸೆಂಬರ್ 2012, 19:38 IST

ಬೆಂಗಳೂರು: `ನಮ್ಮ ಮೆಟ್ರೊ'ದ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರದ ಅಂತಿಮ ಒಪ್ಪಿಗೆ ಸಿಕ್ಕ ತಕ್ಷಣ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ ವಿಸ್ತರಣಾ ಮಾರ್ಗದ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ಪ್ರಕಟಿಸಿದೆ.

`ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆಯ ಅನುಷ್ಠಾನಕ್ಕೆ ಅಂತಿಮ ಹಂತದ ಸಿದ್ಧತೆಗಳು ಸಾಗಿವೆ. ಬೈಯಪ್ಪನಹಳ್ಳಿ ಹಾಗೂ ವೈಟ್‌ಫೀಲ್ಡ್ ನಡುವೆ ವಿಸ್ತರಣಾ ಮಾರ್ಗದ ಉದ್ದ 12.5 ಕಿ.ಮೀ ಆಗಿದ್ದು, ಈ ಕಾಮಗಾರಿ ಮಹತ್ವದ್ದು. ಈ ಕಾಮಗಾರಿಯಿಂದ ಅನೇಕ ಬಡಾವಣೆಗಳ ಜತೆಗೆ ಐಟಿ ಕಂಪೆನಿಗಳ ಸಂಪರ್ಕಕ್ಕೆ ಸುಲಭವಾಗುತ್ತದೆ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ `ಪ್ರಜಾವಾಣಿ'ಗೆ ತಿಳಿಸಿದರು.



`ಪ್ರಸ್ತಾವಿತ ಈ ಕಾಮಗಾರಿಯು ಬೈಯಪ್ಪನಹಳ್ಳಿಯ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ದಕ್ಷಿಣ ದಿಕ್ಕಿನಿಂದ ಆರಂಭಗೊಂಡು ಕಸ್ತೂರಿನಗರ, ಹೊರವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆಯವರೆಗೆ ಸಾಗಲಿದೆ. ಬಳಿಕ ವೈಟ್‌ಫೀಲ್ಡ್ ರಸ್ತೆ ಮೂಲಕ ಸಾಗಿ ಐಟಿಪಿಎಲ್ ತಲುಪಲಿದೆ ಹಾಗೂ ವೈಟ್‌ಫೀಲ್ಡ್‌ನಲ್ಲಿರುವ ಸತ್ಯಸಾಯಿ ಆಶ್ರಮದಲ್ಲಿ ಕೊನೆಗೊಳ್ಳಲಿದೆ. ಈ ಕಾರಿಡಾರಿನಲ್ಲಿ 14 ನಿಲ್ದಾಣಗಳಿವೆ' ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

`ಎರಡನೇ ಹಂತದಲ್ಲಿ 16.6 ಕಿ.ಮೀ ಉದ್ದದ ಆರ್.ವಿ. ರಸ್ತೆ- ಬೊಮ್ಮಸಂದ್ರ (ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ) ಹಾಗೂ ಮೈಸೂರು ರಸ್ತೆ ಟರ್ಮಿನಲ್-ಕೆಂಗೇರಿ (5.90 ಕಿ.ಮೀ) ಕಾಮಗಾರಿಗೂ ಆದ್ಯತೆ ನೀಡಲಾಗುವುದು' ಎಂದು ಶಿವಶೈಲಂ ಸ್ಪಷ್ಟಪಡಿಸಿದರು.

`ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ನಡುವೆ 16 ನಿಲ್ದಾಣಗಳು ಇರಲಿವೆ. ಇದರಲ್ಲಿ ರಾಗಿಗುಡ್ಡ ದೇವಸ್ಥಾನ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ, ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಬಡಾವಣೆ, ಆಕ್ಸ್‌ಫರ್ಡ್ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಾಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಬೊಮ್ಮಸಂದ್ರ ಪ್ರಮುಖವಾದುದು' ಎಂದರು.  `ಮೈಸೂರು ರಸ್ತೆ- ಕೆಂಗೇರಿ ನಡುವೆ ಆರು ನಿಲ್ದಾಣಗಳು ಇರಲಿವೆ. ನಾಯಂಡಹಳ್ಳಿ, ರಾಜೇಶ್ವರಿ ನಗರ, ಬೆಂಗಳೂರು ವಿವಿ ಕ್ರಾಸ್, ಆರ್‌ವಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕೆಂಗೇರಿ ಸೇರಿದಂತೆ ಆರು ಕಡೆಯಲ್ಲಿ ನಿಲ್ದಾಣಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ' ಎಂದರು.

ಮೆಟ್ರೊ ಎರಡನೇ ಹಂತದಲ್ಲಿ ಒಟ್ಟು 72 ಕಿ.ಮೀ. ವಿಸ್ತಾರದ ಕಾಮಗಾರಿ ನಡೆಯಲಿದೆ. 2017-18ರೊಳಗೆ 2ನೇ ಹಂತವನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT