
ಬೆಂಗಳೂರು: ಎಳನೀರು ಕುಡಿದ ವ್ಯಕ್ತಿಯೊಬ್ಬರು ನೀಡಿದ ₹ 2,000 ನೋಟಿಗೆ ಚಿಲ್ಲರೆ ಸಿಗದೇ ಮಾರಾಟಗಾರ ಪರದಾಡಿದ ಪ್ರಸಂಗವೊಂದು ಮಂಗಳವಾರ ಇಲ್ಲಿ ನಡೆದಿದೆ.
ನಗರದ ಮಲ್ಲೇಶ್ವರಂ ರೈಲು ನಿಲ್ದಾಣದ ಬಳಿ ತಳ್ಳುಗಾಡಿಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ನಂಜಪ್ಪ ಬಳಿ ಮಂಗಳವಾರ ಬೆಳಿಗ್ಗೆ ಎಳನೀರು ಕುಡಿದ ಗ್ರಾಹಕನೊಬ್ಬ ₹ 2,000 ನೋಟು ನೀಡಿದ!
‘ಕುಡಿದದ್ದು ₹20 ಎಳನೀರು, ನೀಡಿದ್ದು ₹2000 ನೋಟು! ಚಿಲ್ಲರೆ ಎಲ್ಲಿಂದ ತರಲಿ ಸ್ವಾಮಿ? ಚಿಲ್ಲರೆ ಇದ್ದರೆ ಕೊಡಿ’ ಎಂದು ನಂಜಪ್ಪ ಕೇಳಿದ. ಜೇಬುಗಳನ್ನು ತಡಕಾಡಿದ ಗ್ರಾಹಕ ‘ನನ್ನ ಬಳಿ ₹ 2,000 ನೋಟು ಬಿಟ್ಟರೆ ಬಿಡಿಗಾಸೂ ಇಲ್ಲ. ಮೇಲಾಗಿ ನನಗೆ ಇಲ್ಲಿ ಯಾರ ಪರಿಚಯವೂ ಇಲ್ಲದ ಕಾರಣ ಚಿಲ್ಲರೆ ಸಿಗುವುದೂ ಕಷ್ಟ’ ಎಂದ. ಚಿಲ್ಲರೆ ಹುಡುಕುವ ಹೊಣೆ ಎಳನೀರು ಮಾರಾಟಗಾರ ನಂಜಪ್ಪನ ಹೆಗಲೇರಿತು.
ವ್ಯಾಪಾರ ಬಿಟ್ಟು ಚಿಲ್ಲರೆಗಾಗಿ ಅಲೆದು ಸುಸ್ತಾದ ನಂಜಪ್ಪ ಎದುರಿಗೆ ಸಿಕ್ಕವರ ಬಳಿ ಚಿಲ್ಲರೆ ನೀಡುವಂತೆ ಕೇಳುತ್ತಿದ್ದ. ‘ಒಂದು ವಾರದಿಂದ ವ್ಯಾಪಾರ ಇಲ್ಲ. ದಿನವಿಡಿ ಎಳನೀರು ಮಾರಾಟ ಮಾಡಿದರೂ ₹ 2,000 ಸಿಗುವುದಿಲ್ಲ. ಅಂತಹ ಸ್ಥಿತಿಯಲ್ಲಿ ₹20 ಎಳನೀರಿಗೆ ಇಷ್ಟೊಂದು ದೊಡ್ಡ ನೋಟು ನೀಡಿದರೆ ಹೇಗೆ ಸ್ವಾಮಿ? ನಾನು ಬಡವ’ ಎಂದು ಅಲವತ್ತುಕೊಂಡಿದ್ದೂ ಆಯಿತು.
ನಂಜಪ್ಪನಿಗೆ ಎಳನೀರಿನ ₹20 ಕೈತಪ್ಪುತ್ತದೆ ಎನ್ನುವ ಚಿಂತೆಯಾದರೆ. ಎಳನೀರು ಕುಡಿದ ವ್ಯಕ್ತಿ ₹2,000 ಬಿಟ್ಟು ಕದಲುತ್ತಲೇ ಇಲ್ಲ. ಎರಡು ತಾಸು ಕಾಯ್ದರೂ ₹2,000 ನೋಟಿಗೆ ಚಿಲ್ಲರೆ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಜನರ ದೊಡ್ಡ ದಂಡು ಅಲ್ಲಿ ಸೇರಿತ್ತು.
‘ಎಳನೀರು ಮಾರಾಟಗಾರ ಇಲ್ಲಿಯೇ ಇರುತ್ತಾನೆ. ಆತನಿಗೆ ₹20 ತಂದು ಕೊಟ್ಟು ₹2,000 ನೋಟು ತೆಗೆದುಕೊಂಡು ಹೋಗಿ’ ಎಂದು ನ್ಯಾಯ ಇತ್ಯರ್ಥ ಪಡಿಸಿದರು.
ನಂಜಪ್ಪನ ಪರಿಚಯದ ಸ್ಥಳೀಯ ಪಾನ್‌ಬೀಡಾ ಅಂಗಡಿಯ ಮಾಲೀಕ ಮಧ್ಯಸ್ಥಿಕೆವಹಿಸಿ ಗ್ರಾಹಕನ ಮನವೊಲಿಸಿ, ಚಿಲ್ಲರೆ ತಂದು ₹ 2,000 ನೋಟು ಪಡೆಯುವಂತೆ ಸಲಹೆ ನೀಡಿ ಕಳಿಸಿದ.
₹ 20 ಬರುವವರೆಗೆ ನಂಜಪ್ಪ ತಾತ್ಕಾಲಿಕವಾಗಿ ₹ 2,000 ನೋಟಿನ ಒಡೆಯನಾದ ಖುಷಿಯಲ್ಲಿ ಕೈಯಲ್ಲಿ ನೋಟು ಹಿಡಿದು ಮೊಬೈಲ್‌ಗೆ ಪೋಸು ನೀಡಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.