ADVERTISEMENT

₹ 20 ಲಕ್ಷ ಠೇವಣಿ ಇರಿಸಿ ವ್ಯವಹರಿಸಿ

ಪ್ರಕಾಶ್ ಪಡುಕೋಣೆಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:05 IST
Last Updated 4 ಏಪ್ರಿಲ್ 2018, 20:05 IST

ಬೆಂಗಳೂರು: ‘ಸ್ಥಗಿತಗೊಂಡಿರುವ ನಿಮ್ಮ ಬ್ಯಾಂಕ್ ಖಾತೆಯಲ್ಲಿ ವ್ಯವಹಾರ ಮುಂದುವರಿಸಬೇಕಾದರೆ ಅಧೀನ ನ್ಯಾಯಾಲಯದಲ್ಲಿ ₹ 20 ಲಕ್ಷ ಭದ್ರತಾ ಠೇವಣಿ ಇರಿಸಿ’ ಎಂದು ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಗೆ ಹೈಕೋರ್ಟ್ ನಿರ್ದೇಶಿಸಿದೆ.

‘ಬನಶಂಕರಿ ಠಾಣೆಯ ಪೊಲೀಸರು ಯಾವುದೇ ಪೂರ್ವ ಮಾಹಿತಿ ನೀಡದೆ ಐಡಿಬಿಐ ಬ್ಯಾಂಕ್‌ನ ಮಲ್ಲೇಶ್ವರ ಶಾಖೆಯಲ್ಲಿರುವ ನನ್ನ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಇದನ್ನು ತೆರವುಗೊಳಿಸಲು ನಿರ್ದೇಶಿಸಬೇಕು‘ ಎಂದು ಕೋರಿ ಪ್ರಕಾಶ್ ಪಡುಕೋಣೆ, ಅವರ ಪತ್ನಿ ಉಜಾಲಾ ಪಡುಕೋಣೆ ಹಾಗೂ ಪುತ್ರಿ ಅನಿಷಾ ಪಡುಕೋಣೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್. ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಅರ್ಜಿ ವಿಲೇವಾರಿ ಮಾಡಿದೆ.

ಪಡುಕೋಣೆ ಪರ ವಾದ ಮಂಡಿಸಿದ ವಕೀಲರು, ‘ಅರ್ಜಿದಾರರು ವಿಕ್ರಂ ಇನ್ವೆಸ್ಟ್‌ಮೆಂಟ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಹಣದಲ್ಲಿ ಲಾಭಾಂಶದ ರೂಪವಾಗಿ ₹ 20 ಲಕ್ಷ ಪಡೆದಿದ್ದಾರೆ. ಸದ್ಯ ಅವರ ಬ್ಯಾಂಕ್‌ ಖಾತೆಯಲ್ಲಿ ₹ 87 ಲಕ್ಷ ಇದೆ. ಈ ಖಾತೆ ಸ್ಥಗಿತಗೊಂಡಿರುವುದರಿಂದ ಅವರ ಇತರ ವ್ಯವಹಾರಗಳಿಗೆ ಅಡ್ಡಿಯಾಗಿದೆ. ಆದ್ದರಿಂದ ಖಾತೆಯಲ್ಲಿ ವ್ಯವಹರಿಸಲು ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ, ‘ವಿಕ್ರಂ ಇನ್ವೆಸ್ಟ್‌ಮೆಂಟ್ ಸಂಸ್ಥೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. 2,400ಕ್ಕೂ ಅಧಿಕ ಜನರು ಇದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಈ ಸಂಬಂಧ 250ಕ್ಕೂ ಹೆಚ್ಚು ದೂರು ದಾಖಲಾಗಿವೆ. ತನಿಖೆಯ ದೃಷ್ಟಿಯಿಂದ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದವರ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ. ಅಂತಹ ಖಾತೆಗಳಲ್ಲಿ ಪಡುಕೋಣೆ ಅವರ ಖಾತೆಯೂ ಒಂದು’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಸಂಸ್ಥೆಯಿಂದ ಲಾಭದ ರೂಪದಲ್ಲಿ ಪಡೆಯಲಾಗಿದೆ ಎನ್ನಲಾದ ₹20 ಲಕ್ಷವನ್ನು ಸೆಷನ್ಸ್‌ ನ್ಯಾಯಾಲಯದಲ್ಲಿ ಠೇವಣಿ ಇರಿಸಿ’ ಎಂದು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.