ADVERTISEMENT

₹9 ಸಾವಿರ ಕೋಟಿಗೆ ಕುಗ್ಗಿದ ಬಜೆಟ್‌?

ಪಾಲಿಕೆ ಆಯುಕ್ತ ಮಂಜುನಾಥಪ್ರಸಾದ್‌ ಅವರ ಪ್ರಸ್ತಾವಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 19:55 IST
Last Updated 26 ಏಪ್ರಿಲ್ 2019, 19:55 IST
ಬಜೆಟ್‌ ಮಂಡಿಸಿದ್ದ ತೆರಿಗೆ ಮತ್ತು ಆರ್ಥಿಕ ಸಾಯಿ ಸಮಿತಿ ಅಧ್ಯಕ್ಷೆ ಎಸ್.ಪಿ ಹೇಮಲತಾ
ಬಜೆಟ್‌ ಮಂಡಿಸಿದ್ದ ತೆರಿಗೆ ಮತ್ತು ಆರ್ಥಿಕ ಸಾಯಿ ಸಮಿತಿ ಅಧ್ಯಕ್ಷೆ ಎಸ್.ಪಿ ಹೇಮಲತಾ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2019–20ನೇ ಸಾಲಿನ ಬಜೆಟ್‌ ಗಾತ್ರವನ್ನು₹ 12,958 ಕೋಟಿಯಿಂದ ₹ 9 ಸಾವಿರ ಕೋಟಿಗೆ ತಗ್ಗಿಸಲು ರಾಜ್ಯ ಹಣಕಾಸು ಇಲಾಖೆಯು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್‌ನ ಲೆಕ್ಕಾಚಾರ ಅವಾಸ್ತವಿಕವಾಗಿದ್ದು, ಅದರ ಗಾತ್ರವನ್ನು ₹ 9 ಸಾವಿರ ಕೋಟಿಗೆ ತಗ್ಗಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಆಯುಕ್ತರ ಪ್ರಸ್ತಾವವನ್ನು ಒಪ್ಪಿದ್ದ ನಗರಾಭಿವೃದ್ಧಿ ಇಲಾಖೆ, ಅದನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಟ್ಟಿತ್ತು. ಈಗ ಎರಡೂ ಇಲಾಖೆಗಳು ಅನುಮತಿ ನೀಡಿರುವುದರಿಂದ ಬಜೆಟ್‌ ಗಾತ್ರವನ್ನು ಕುಗ್ಗಿಸಲು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಮತ್ತೆ ನಿರ್ಣಯ ಕೈಗೊಂಡು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಬೇಕಿದೆ.

2017–18ನೇ ಸಾಲಿನ ನೈಜ ಲೆಕ್ಕಾಚಾರಗಳಿಗೆ ಹೋಲಿಸಿದರೆ 2019–20ನೇ ಸಾಲಿನ ಬಜೆಟ್‌ ಗಾತ್ರವು ಶೇ 173.61ರಷ್ಟು ಹೆಚ್ಚು ಇದೆ. 2017–18ನೇ ಸಾಲಿನ ಅಂದಾಜು ಲೆಕ್ಕಾಚಾರಗಳಿಗೆ ಹೋಲಿಸಿದರೂ ಬಜೆಟ್‌ ಗಾತ್ರ ಶೇ 148.09ರಷ್ಟು ಹೆಚ್ಚು ಇದೆ. ಇದನ್ನು ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ಆಯುಕ್ತರು ಪತ್ರದಲ್ಲಿ ಹೇಳಿದ್ದರು.

ADVERTISEMENT

ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ಆದಾಯ ಬರದಿದ್ದರೂ ವೆಚ್ಚಗಳಿಗೆ ಒದಗಿಸಿದಷ್ಟು ಅನುದಾನಕ್ಕೆ ತಕ್ಕಂತೆ ಜಾಬ್‌ ಸಂಖ್ಯೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪಾಲಿಕೆಯ ಆರ್ಥಿಕ ಹೊರೆ ಹೆಚ್ಚುತ್ತಿರುವುದರಿಂದ ಹಣಕಾಸು ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದರು.

ಪ್ರತಿ ವರ್ಷವೂ ವಾಸ್ತವಕ್ಕಿಂತ ಹೆಚ್ಚು ಆದಾಯ ನಿರೀಕ್ಷೆ ಮಾಡಿ ಬಜೆಟ್‌ ಮಂಡಿಸುತ್ತಿರುವುದರಿಂದ ಏನೆಲ್ಲ ಪ್ರತಿಕೂಲ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಆಯುಕ್ತರು ಎಳೆ ಎಳೆಯಾಗಿ ವಿವರಿಸಿದ್ದರು.

ಬಜೆಟ್‌ ಗಾತ್ರವನ್ನು ₹ 9 ಸಾವಿರ ಕೋಟಿಗೆ ಮಿತಿಗೊಳಿಸಿದರೆ, ಅದು 2018–19ನೇ ಸಾಲಿನ ವಾಸ್ತವ ಲೆಕ್ಕಾಚಾರಕ್ಕಿಂತ ಶೇ 22.92ರಷ್ಟು ಹೆಚ್ಚಾಗುತ್ತದೆ. ಒಂದು ವೇಳೆ ನಿರೀಕ್ಷೆಗಿಂತ ಹೆಚ್ಚು ಆದಾಯ ಸಂಗ್ರಹವಾದಲ್ಲಿ ಪೂರಕ ಬಜೆಟ್‌ ಮಂಡಿಸಿ ಅದಕ್ಕೆ ಅನುಮೋದನೆ ಕೋರಲು ಅವಕಾಶ ಇದೆ ಎಂದೂ ಸಲಹೆ ನೀಡಿದ್ದರು.

2019–20ನೇ ಸಾಲಿನಲ್ಲಿ ₹ 8987.73 ಕೋಟಿ ಆದಾಯ ನಿರೀಕ್ಷಿಸಿ ಬಜೆಟ್‌ ಮಂಡಿಸಬಹುದು ಎಂದುಪಾಲಿಕೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಫೆ.18ರಂದು ₹ 10,691. 82 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಬಳಿಕ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆದಾಗ ಗಾತ್ರವನ್ನು ಮತ್ತಷ್ಟು ಹಿಗ್ಗಿಸಲಾಗಿತ್ತು.

**

ಮೇಯರ್ ರಾಜೀನಾಮೆಗೆ ಒತ್ತಾಯ

ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷದವರ ಸಲಹೆ ಸ್ವೀಕರಿಸಿದ್ದರೆ ಆಡಳಿತ ಪಕ್ಷಕ್ಕೆ ಮುಖಭಂಗ ಆಗುತ್ತಿರಲಿಲ್ಲ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಟೀಕಿಸಿದ್ದಾರೆ.

ಸರ್ಕಾರದ ನಿರ್ದೇಶನದಂತೆ ₹9 ಸಾವಿರ ಮಿತಿಗೊಳಿಸಿ ಕೌನ್ಸಿಲ್ ಅನುಮತಿ ಪಡೆಯಬೇಕಾಗುತ್ತದೆ. ಆಯವ್ಯಯ ಅನುಮೋದನೆಯಾಗಲು ಕನಿಷ್ಠ 2 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ನಗರದ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ ಎಂದು ಹೇಳಿದ್ದಾರೆ.

ಅವೈಜ್ಞಾನಿಕ ಆಯವ್ಯಯ ಮಂಡನೆಗೆ ಕಾರಣರಾದ ಮೇಯರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಬಿಕೆ, ‘ಬಜೆಟ್‌ನಲ್ಲಿ ಎಷ್ಟು ಪ್ರಮಾಣವನ್ನು ಕಡಿತಗೊಳಿಸಬೇಕು ಎಂಬುದು ಇನ್ನೂ ಅಧಿಕೃತವಾಗಿ ನನಗೆ ತಿಳಿದಿಲ್ಲ. ಸರ್ಕಾರದ ಆದೇಶ ಏನು ಬರುತ್ತದೆ ನೋಡೋಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.