ADVERTISEMENT

21, 22ರಂದು ರಾಷ್ಟ್ರೀಯ ಜೈವಿಕ ಇಂಧನ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 20:15 IST
Last Updated 19 ಫೆಬ್ರುವರಿ 2011, 20:15 IST

ಬೆಂಗಳೂರು: ‘ಜೈವಿಕ ಇಂಧನ: ಇಂದಿನ ಅಗತ್ಯತೆ’ ಎಂಬ ಪರಿಕಲ್ಪನೆಯಡಿ ಬಿಜೆಪಿಯ ಜೈವಿಕ ಇಂಧನ ಘಟಕ ಬೆಂಗಳೂರಿನಲ್ಲಿ ಇದೇ 21 ಮತ್ತು 22ರಂದು ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಈ ಸಮ್ಮೇಳನವನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸೌತ್ ಎಂಡ್ ವೃತ್ತದ ಬಳಿ ಇರುವ ಸಂಸ್ಕೃತಿ ಸಭಾಂಗಣದಲ್ಲಿ ಈ ಸಮ್ಮೇಳನ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ರೈತರ ಆದಾಯವನ್ನು ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಿರುವ ಸಸ್ಯ ಬೆಳೆಸುವಂತೆ ಮಾಡುವ ಮೂಲಕ ಹೆಚ್ಚಿಸುವುದು, ಇಂಧನ ಬಳಕೆಯ ವಿಷಯದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವುದು ಬಿಜೆಪಿಯ ಜೈವಿಕ ಇಂಧನ ಘಟಕದ ಗುರಿ’ ಎಂದರು. ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ 30ಕ್ಕೂ ಹೆಚ್ಚು ಸಚಿವರು ಮತ್ತು ಜೈವಿಕ ಇಂಧನ ತಜ್ಞರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯ ನಾಯ್ಡು ಮತ್ತಿತರರು ಭಾಗವಹಿಸಲಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ವಾಮನ ಆಚಾರ್ಯ, ‘ಗ್ರಾಮೀಣ ಜನತೆ ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಿರುವ ಸಸ್ಯಗಳನ್ನು ಬೆಳೆಯುವಂತಾಗಬೇಕು. ಆದರೆ ಈ ಸಸ್ಯ ಬೆಳೆಸುವ ಪ್ರಕ್ರಿಯೆ ಯಾವುದೇ ಕೈಗಾರಿಕೋದ್ಯಮಿಯ ಹಿಡಿತಕ್ಕೆ ಸಿಗುವಂತಾಗಬಾರದು’ ಎಂದರು. ಪಕ್ಷದ ಜೈವಿಕ ಇಂಧನ ಘಟಕ ನವದೆಹಲಿಯಲ್ಲಿ 201ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಸಮ್ಮೇಳನ ಆಯೋಜಿಸಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.