ADVERTISEMENT

ಬೆಂಗಳೂರು | ಮಾಲಿನ್ಯ ಪಟ್ಟಿಗೆ ನಗರದ 21 ಕೆರೆ ಸೇರ್ಪಡೆ

ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿಯಾದ 47 ಕೆರೆಗಳಲ್ಲಿ ಕಲ್ಮಶ; ಬಿಡಬ್ಲ್ಯುಎಸ್‌ಎಸ್‌ಬಿಯಿಂದ ನಿರ್ಲಕ್ಷ್ಯ

Published 4 ಮಾರ್ಚ್ 2023, 0:45 IST
Last Updated 4 ಮಾರ್ಚ್ 2023, 0:45 IST
ಬೊಮ್ಮನಹಳ್ಳಿ ವಲಯದಲ್ಲಿರುವ ಬಸವನಪುರ ಕೆರೆಯಲ್ಲಿ ಮೇಲ್ನೋಟಕ್ಕೇ ಕಾಣುವ ಕಲ್ಮಶ
ಬೊಮ್ಮನಹಳ್ಳಿ ವಲಯದಲ್ಲಿರುವ ಬಸವನಪುರ ಕೆರೆಯಲ್ಲಿ ಮೇಲ್ನೋಟಕ್ಕೇ ಕಾಣುವ ಕಲ್ಮಶ   

ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿ ಮಾಡಿರುವ ಕೆರೆಗಳು ಬಿಡಬ್ಲ್ಯುಎಸ್‌ಎಸ್‌ಬಿಯ ನಿರ್ಲಕ್ಷ್ಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣೆ ಕೊರತೆಯಿಂದ ಮಾಲಿನ್ಯ ತಾಣಗಳಾಗಿವೆ. ಜನವರಿಯಲ್ಲೇ 21 ಕೆರೆಗಳು ಅತ್ಯಂತ ಗರಿಷ್ಠ ಮಟ್ಟ (ಗ್ರೇಡ್) ಮಾಲಿನ್ಯ ಹೊಂದಿವೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದಲ್ಲಿರುವ 106 ಕೆರೆಗಳಲ್ಲಿನ ನೀರಿನ ಗುಣಮಟ್ಟ ಅಳೆಯಲು ಸೆನ್ಸಾರ್‌ ಮಾಪನಗಳನ್ನು ಅಳವಡಿಸಿದೆ. ಅದರ ಪ್ರಕಾರವೇ, ಒಟ್ಟಾರೆ 47 ಕೆರೆಗಳ ನೀರಿನ ಗುಣಮಟ್ಟ ಕಟ್ಟಕಡೆಯ ‘ಇ’ ಗ್ರೇಡ್‌ನಲ್ಲಿದೆ. ಅಂದರೆ, ಈ ಕೆರೆಗಳ ನೀರು ಲೋಹ, ಕಲ್ಮಶಯುಕ್ತ, ಕೈಗಾರಿಕೆ ಮಾಲಿನ್ಯಕಾರಕಗಳನ್ನು ಅತಿಹೆಚ್ಚಾಗಿ ಹೊಂದಿವೆ. ಮೀನುಗಳನ್ನು ಸಾಕಲೂ ಯೋಗ್ಯವಲ್ಲ.

ಪ್ರತಿಯೊಂದು ಕೆರೆಗೆ ಕನಿಷ್ಠ ₹5 ಕೋಟಿಯನ್ನು ವೆಚ್ಚ ಮಾಡಲಾಗಿದೆ. ಆದರೂ ಅವು ಎಷ್ಟು ಹಾಳಾಗಿವೆ ಎನ್ನುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶವೇ ಸಾಬೀತು ಮಾಡುತ್ತದೆ.

ADVERTISEMENT

ಕಾಯ್ದೆ ನಿರ್ವಹಣೆ ಇಲ್ಲ: ‘ನೀರು ಕಾಯ್ದೆ–1974 ಪ್ರಕಾರ ಎಲ್ಲ ರೀತಿಯ ಮಾಲಿನ್ಯವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ಆದರೆ, ಈ ಕಾರ್ಯವನ್ನು ಅದು ಮಾಡುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಜನರಿಗೆ ಮಾಹಿತಿಯನ್ನೂ ನೀಡುವುದಿಲ್ಲ’ ಎಂದು ಫ್ರೆಂಡ್ಸ್‌ ಆಫ್‌ ಲೇಕ್‌ನ ರಾಮ್‌ಪ್ರಸಾದ್ ದೂರಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೂ ಸೇರಿದಂತೆ ಪರಿಸರ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಪ್ರತಿಕ್ರಿಯಿಸಲಿಲ್ಲ.

ಗುಣಮಟ್ಟ ಬಿಟ್ಟು ಎಲ್ಲ ಇದೆ: ‘ಕೆರೆ ಎಂದರೆ ಅದರಲ್ಲಿರುವ ನೀರಿನ ಗುಣಮಟ್ಟ ಮುಖ್ಯ. ಅದನ್ನು ಬಿಟ್ಟು ಏನೇನೋ ಅಭಿವೃದ್ಧಿ ಮಾಡಿದರೆ ಪ್ರಯೋಜನಕ್ಕೆ ಬರುವುದಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಪಾಥ್‌, ಟ್ರ್ಯಾಕ್‌ ಎಂದು ಏನೆಲ್ಲ ಮಾಡಿದರೂ ನೀರು ಕಲ್ಮಶಯುಕ್ತವಾಗಿದ್ದರೆ ಪರಿಸರವೇ ಹಾಳಾಗುತ್ತದೆ’ ಎಂದು ಆ್ಯಕ್ಷನ್ ಏಡ್‌ನ ರಾಘವೇಂದ್ರ ಬಿ. ಪಚ್ಚಾಪುರ್‌ ಆತಂಕ ವ್ಯಕ್ತಪಡಿಸಿದರು.

ಒಳಚರಂಡಿ ನೀರಿನಿಂದಲೇ ಮಾಲಿನ್ಯ: ‘ಕೆರೆಗಳಿಗೆ ಒಳಚರಂಡಿ ನೀರು ಹರಿಯುತ್ತಿದೆ. ಇದನ್ನು ತಡೆಯಿರಿ ಎಂದು ಬಿಡಬ್ಲ್ಯುಎಸ್‌ಎಸ್‌ಬಿಗೆ ಸಾಕಷ್ಟು ಬಾರಿ ಹೇಳಲಾಗಿದೆ. ಹೊಸ ಕೊಳವೆ ಮಾರ್ಗ ಹಾಕಲು ಹಣವಿಲ್ಲ ಎನ್ನುತ್ತಾರೆ. ಅವರು ಕೆರೆಗೆ ಒಳಚರಂಡಿ ನೀರು ಬಿಡುವುದನ್ನು ತಡೆದರೆ ಕೆರೆಗಳು ಮಾಲಿನ್ಯ ಮುಕ್ತವಾಗುತ್ತವೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.