ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹1,100 ಕೋಟಿ, ವಾರ್ಡ್ ರಸ್ತೆ, ಚರಂಡಿ ಅಭಿವೃದ್ಧಿಗೆ ₹1,100 ಕೋಟಿ ವೆಚ್ಚದ ಎರಡು ಕ್ರಿಯಾಯೋಜನೆಗಳನ್ನು ಸಲ್ಲಿಸುವಂತೆ ಜಿಬಿಎಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಜಿಬಿಎ ಸಭೆಯಲ್ಲಿ, ರಸ್ತೆಗಳ ಅಭಿವೃದ್ಧಿ ಬಗ್ಗೆ ಸಚಿವರು ಹಾಗೂ ಶಾಸಕರು ಪ್ರಸ್ತಾಪಿಸಿದ್ದರು. ಇದಕ್ಕಾಗಿ, ಕ್ರಿಯಾ ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಎರಡೂ ಕ್ರಿಯಾ ಯೋಜನೆಗಳನ್ನು ಐದು ನಗರ ಪಾಲಿಕೆಗಳಿಂದ ಪಡೆದು, ಪರಿಶೀಲಿಸಿ, ಕ್ರೋಡೀಕರಿಸಿ ಸರ್ಕಾರಕ್ಕೆ ಶೀಘ್ರ ಸಲ್ಲಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಅ.15ರಂದು ಸೂಚಿಸಲಾಗಿದೆ.
ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹1,100 ಕೋಟಿ ಕ್ರಿಯಾ ಯೋಜನೆಯನ್ನು ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ ಪ್ರಸ್ತಾವ ಸಲ್ಲಿಸಬೇಕು. ವಾರ್ಡ್‌ಗಳ ರಸ್ತೆ, ಚರಂಡಿ ಅಭಿವೃದ್ಧಿ, ನಿರ್ವಹಣೆ ಕಾಮಗಾರಿಗಳ ₹1,100 ಕೋಟಿ ಕ್ರಿಯಾ ಯೋಜನೆಯನ್ನು ಮುಖ್ಯಮಂತ್ರಿಯವರ ವಿವೇಚನಾ ನಿಧಿಯಲ್ಲಿ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
‘ನಮ್ಮ ರಸ್ತೆ ಕೈಪಿಡಿ’ಯಲ್ಲಿನ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು, ಪ್ರತಿ ನಗರ ಪಾಲಿಕೆಗಳನ್ವಯ ಅಂದಾಜು ಪಟ್ಟಿ ತಯಾರಿಸಿ, ಮುಖ್ಯ ಎಂಜಿನಿಯರ್‌ನಿಂದ ದೃಢೀಕರಿಸಬೇಕು. ಲೋಕೋಪಯೋಗಿ ಇಲಾಖೆಯ ಎಸ್‌ಆರ್ ದರಗಳಂತೆ ಅಂದಾಜು ಪಟ್ಟಿ ಸಿದ್ಧಪಡಿಸಬೇಕು. ಕಾಮಗಾರಿಗಳು ಸಾರ್ವಜನಿಕ ಸುಗಮ ಸಂಚಾರ ದೃಷ್ಟಿಯಿಂದ ಅತ್ಯಂತ ಅವಶ್ಯಕ ಎಂಬುದನ್ನೂ ಮುಖ್ಯ ಎಂಜಿನಿಯರ್ ದೃಢೀಕರಿಸಬೇಕು. ರಸ್ತೆ ನಿರ್ಮಾಣ, ಅಂದಾಜು ಪಟ್ಟಿ ತಯಾರಿಕೆ, ಕಾಮಗಾರಿಗಳಿಗೆ ನಿಗದಿಪಡಿಸಿರುವ ಅಂದಾಜು ಮೊತ್ತದಲ್ಲಿ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕರೂಪ ಮತ್ತು ಏಕ ವಿನ್ಯಾಸ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ.
ಈ ಸೂಚನೆಯಂತೆ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಐದೂ ನಗರ ಪಾಲಿಕೆಗಳ ಆಯುಕ್ತರಿಗೆ ಪತ್ರ ಬರೆದು, ಕ್ರಿಯಾಯೋಜನೆ ಸಿದ್ಧಪಡಿಸಿ ಕೂಡಲೇ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.