ADVERTISEMENT

ಕೋವಿಡ್‌: ಹದಿಮೂರೇ ದಿನಗಳಲ್ಲಿ 2,754 ಸಾವು, ಮೇ ತಿಂಗಳಲ್ಲಿ ಶೇ 30ರಷ್ಟು ಸಾವು

ಬಿಬಿಎಂಪಿ: ಕೊರೊನಾದಿಂದ 9,126 ಮಂದಿ ಕೊನೆಯುಸಿರು * ಸಾವು ಹೆಚ್ಚಳಕ್ಕೆ ಐಸಿಯು ಕೊರತೆ ಕಾರಣ

ಪ್ರವೀಣ ಕುಮಾರ್ ಪಿ.ವಿ.
Published 13 ಮೇ 2021, 21:13 IST
Last Updated 13 ಮೇ 2021, 21:13 IST
ಕೋವಿಡ್‌–19ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುತ್ತಿರುವುದು–ಸಾಂದರ್ಭಿಕ ಚಿತ್ರ
ಕೋವಿಡ್‌–19ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುತ್ತಿರುವುದು–ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೊರೊನಾ ಸಾವಿನ ಸರಮಾಲೆ ಬೆಳೆಯುತ್ತಲೇ ಇದೆ. ಈ ಸೋಂಕಿಗೆ ನಗರದಲ್ಲಿ ಇದುವರೆಗೆ 9,126 ಮಂದಿ ಕೊನೆಯುಸಿರೆಳೆದಿದ್ದಾರೆ. ಇದರಲ್ಲಿ 2021ರ ಮೇ ತಿಂಗಳಲ್ಲಿ ಹದಿಮೂರೇ ದಿನಗಳಲ್ಲಿ ಸತ್ತವರ ಸಂಖ್ಯೆ 2,754. ಕೋವಿಡ್‌ ಸಾವುಗಳಲ್ಲಿ ಈ ತಿಂಗಳಲ್ಲಿ ಇದುವರೆಗೆ ಸತ್ತವರ ಪಾಲು ಶೇ 30ರಷ್ಟಿದೆ.

ಮೇ 7ರವರೆಗೂ ಸಾವಿನ ಸಂಖ್ಯೆ 200ರ ಗಡಿ ದಾಟಿದ್ದು ಕಡಿಮೆ. ಆದರೆ, ಕಳೆದ ಒಂದೇ ವಾರದಲ್ಲಿ 1,981 ಮಂದಿ ಈ ರೋಗದಿಂದಾಗಿ ಅಸುನೀಗಿದ್ದಾರೆ. ಇವೆಲ್ಲವೂ ಕೋವಿಡ್‌ ಸೋಂಕು ದೃಢಪಟ್ಟು ಬಿಬಿಎಂಪಿಯಲ್ಲಿ ನೋಂದಣಿಯಾಗಿರುವ ಸಾವುಗಳು. ಇತ್ತೀಚೆಗೆ ಕ್ಷಿಪ್ರ ಆ್ಯಂಟಿಜೆನ್‌ ಪರೀಕ್ಷೆ (ರ‍್ಯಾಟ್‌) ಹಾಗೂ ಆರ್‌ಟಿ–ಪಿಸಿಆರ್‌ ಪರೀಕ್ಷೆಗಳೆರಡರಲ್ಲೂ ಕೊರೊನಾ ದೃಢಪಡದೆಯೂ ಈ ಸೋಂಕು ಹೊಂದಿರುವವರ ಸಂಖ್ಯೆ ಸಾಕಷ್ಟಿದೆ. ಕೋವಿಡ್‌ನ ಅನೇಕ ಪ್ರಕರಣಗಳು ವ್ಯಕ್ತಿಯ ಸಿ.ಟಿ.ಸ್ಕ್ಯಾನ್‌ ವೇಳೆ ಪತ್ತೆಯಾಗುತ್ತಿವೆ. ಕೋವಿಡ್‌ ಹೊಂದಿದ್ದರೂ ಪರೀಕ್ಷೆಯಲ್ಲಿ ಸೋಂಕು ದೃಢಪಡದೆ ಸತ್ತವರ ಸಂಖ್ಯೆ ಈ ಅಂಕಿ ಅಂಶಗಳಲ್ಲಿ ಸೇರಿಲ್ಲ.

ಮೇ 7ರ ಬಳಿಕ ನಿತ್ಯವೂ 250ಕ್ಕೂ ಅಧಿಕ ಮಂದಿ ಈ ಕಾಯಿಲೆಯಿಂದಾಗಿ ಸಾವಿಗೀಡಾಗುತ್ತಿದ್ದಾರೆ. ಏಪ್ರಿಲ್ ಅಂತ್ಯದವರೆಗೆ ಕೋವಿಡ್‌ ದೃಢಪಟ್ಟವರಲ್ಲಿ ಸಾವಿನ ದರ ಶೇ 0.56ರಷ್ಟಿತ್ತು. ಅದೀಗ ದುಪ್ಪಟ್ಟಾಗಿದೆ. ಮೇ ತಿಂಗಳಲ್ಲಿ ಸಾವಿನ ದರ ಶೇ 1.08ರಷ್ಟು (ಮೇ 13ರ ಮಾಹಿತಿ) ಇದೆ.

ADVERTISEMENT

ಐಸಿಯು ಕೊರತೆ ಕಾರಣ: ‘ಮೇ ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಐಸಿಯು ಹಾಸಿಗೆಗಳ ಕೊರತೆಯೂ ಪ್ರಮುಖ ಕಾರಣಗಳಲ್ಲೊಂದು. ಒಟ್ಟು ಸಾವುಗಳಲ್ಲಿ ಐಸಿಯು ಹಾಸಿಗೆ ಸಿಗದೇ ಸತ್ತವರ ಪ್ರಮಾಣ ಶೇ 40ರಷ್ಟಿರಬಹುದು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಏಪ್ರಿಲ್‌ ಮಧ್ಯದವರೆಗೂ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡವರಿಗೆ ಹೇಗಾದರೂ ಐಸಿಯು/ವೆಂಟಿಲೇಟರ್‌ ಸೌಕರ್ಯದ ಹಾಸಿಗೆ ಹೊಂದಿಸಲು ಸಾಧ್ಯವಾಗುತ್ತಿತ್ತು. ಏಪ್ರಿಲ್‌ ಕೊನೆಯಲ್ಲಿ ಯಾವ ಆಸ್ಪತ್ರೆಯಲ್ಲೂ ಐಸಿಯು/ ವೆಂಟಿಲೇಟರ್‌ ಹಾಸಿಗೆ ಲಭಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ತುರ್ತು ಸಂದರ್ಭದಲ್ಲಿ ಆಮ್ಲಜನಕ ಹಾಗೂ ತೀವ್ರ ನಿಗಾ ವ್ಯವಸ್ಥೆ ಸಿಗದೇ ಹೋದಾಗ ಸಹಜವಾಗಿಯೇ ಸಾವಿನ ಸಂಖ್ಯೆಯೂ ಹೆಚ್ಚುತ್ತದೆ’ ಎಂದು ಅವರು ವಿವರಿಸಿದರು.

‘ಈಗಲೂ ಐಸಿಯು ಕೊರತೆ ತೀವ್ರವಾಗಿದೆ. ಐಸಿಯು ಹಾಸಿಗೆಗಳ ಸಂಖ್ಯೆಯನ್ನು ತ್ವರಿತಗತಿಯಲ್ಲಿ ಹೆಚ್ಚಿಸದೇ ಹೋದರೆ ಇನ್ನಷ್ಟು ಮಂದಿ ಸಾಯಬೇಕಾಗುತ್ತದೆ. ಸ್ಟೆಪ್‌ಡೌನ್‌ ಆಸ್ಪತ್ರೆಗಳ ನಿರ್ಮಾಣ, ಕೋವಿಡ್‌ ಕೇರ್‌ ಸೆಂಟರ್‌ಗಳ ನಿರ್ಮಾಣಕ್ಕಿಂತಲೂ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ವ್ಯವಸ್ಥೆಯತ್ತ ಗಮನಹರಿಸುವುದು ಮುಖ್ಯ. ಸರ್ಕಾರ ಬೇರೆಲ್ಲದಕ್ಕಿಂತ ಐಸಿಯು ಹೆಚ್ಚಳಕ್ಕೆ ಆದ್ಯತೆ ನೀಡಬೇಕು’ ಎಂದರು.

ಸಿಗದ ತುರ್ತು ಸ್ಪಂದನೆ: ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ರೋಗಿಗಳಿಗೆ ಐಸಿಯು ಹಾಸಿಗೆ ಕೊಡಿಸಲು ಬಿಬಿಎಂಪಿ ಅಧಿಕಾರಿಗಳುಇತ್ತೀಚಿನವರೆಗೂ ನೆರವಾಗುತ್ತಿದ್ದರು. ಹಾಸಿಗೆ ಕಾಯ್ದಿರಿಸುವಿಕೆಯಲ್ಲಿ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪ ಸದ್ದು ಮಾಡಿದ ಬಳಿಕ ಅಧಿಕಾರಿಗಳು ರೋಗಿಗಳಿಗೆ ಐಸಿಯು ಹಾಸಿಗೆ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ. ತುರ್ತು ನೆರವಿಗಾಗಿ ಯಾರಾದರೂ ಸಂಪರ್ಕಿಸಿದರೂ, ‘ಏನಿದ್ದರೂ ಸಹಾಯವಾಣಿಗೆ ಕರೆ ಮಾಡಿ ಹಾಸಿಗೆ ಪಡೆದುಕೊಳ್ಳಿ’ ಎಂದು ಸಲಹೆ ನೀಡಿ ಕರೆ ಕಡಿತಗೊಳಿಸುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಐಸಿಯುವಿನ ಎಲ್ಲ ಹಾಸಿಗೆಗಳೂ ಭರ್ತಿ ಆಗಿವೆ. ಹಾಗಾಗಿ, ಸಹಾಯವಾಣಿಗೆ (1912) ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ.

‘ಮನೆಯಲ್ಲೇ ಚಿಕಿತ್ಸೆ– ಎಚ್ಚರವಿರಲಿ’
‘ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ದೃಢಪಟ್ಟ ಶೇ 90ಕ್ಕೂ ಅಧಿಕ ಮಂದಿ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು ಆರೈಕೆಗೊಳಗಾಗುತ್ತಿದ್ದಾರೆ. ಇಂತಹವರು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಅಳೆಯುವ ‘ಪಲ್ಸ್‌ ಆಕ್ಸಿಮೀಟರ್‌’ ಜೊತೆಯಲ್ಲಿಟ್ಟುಕೊಳ್ಳುವುದು ಹಾಗೂ ಆಗಾಗ ವೈದ್ಯರ ಸಲಹೆ ಪಡೆಯುವುದು ಬಲು ಮುಖ್ಯ. ಆದರೆ, ಅನೇಕರು ತಮಗೇನೂ ಆಗದು ಎಂಬ ಭ್ರಮೆಯಲ್ಲಿ ಇಂತಹ ಮುನ್ನೆಚ್ಚರಿಕೆಗಳನ್ನು ವಹಿಸುವುದಿಲ್ಲ. ರೂಪಾಂತರಗೊಂಡ ತಳಿಯ ಕೊರೊನಾ ವೈರಸ್‌ ಸೋಂಕು ತಗುಲಿದವರಿಗೆ ಕೆಲವೊಮ್ಮೆ ರಕ್ತದಲ್ಲಿ ಆಮ್ಲಜನಕ ದಿಢೀರ್‌ ಕುಸಿಯುತ್ತದೆ. ಆಗ ತ್ವರಿತವಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಬೇಕು. ಇದು ಸಾಧ್ಯವಾಗದೇ ಹೋದರೆ ರೋಗಿ ಸಾಯುವ ಸಂಭವ ಹೆಚ್ಚು’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.