ಬೆಂಗಳೂರು: ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಇದೇ 28ರಿಂದ ಅಕ್ಟೋಬರ್ 6ರವರೆಗೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಸಾನಿಧ್ಯದಲ್ಲಿ ದಸರಾ ಮಹೋತ್ಸವ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ ಎಂದು ದಸರಾ ಧರ್ಮ ಸಮ್ಮೇಳನ ಸಮಿತಿಯ ಅಧ್ಯಕ್ಷರೂ ಆದ ವಸತಿ ಸಚಿವ ವಿ.ಸೋಮಣ್ಣ ಶುಕ್ರವಾರ ಇಲ್ಲಿ ತಿಳಿಸಿದರು.
ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಸಾನಿಧ್ಯದಲ್ಲಿ ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ದಸರಾ ಮಹೋತ್ಸವ ನಡೆಯುತ್ತಿದೆ. 31ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಧರ್ಮಗುರುಗಳು, ರಾಜಕಾರಣಿಗಳು, ಸಾಹಿತಿಗಳು, ಕಲಾವಿದರು, ಚಿಂತಕರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಧರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು `ರಂಭಾಪುರಿ ಬೆಳಗು~ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರದ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿದಿನ ಉಪನ್ಯಾಸ, ಗೋಷ್ಠಿಗಳು ನಡೆಯಲಿದ್ದು, ಇದೊಂದು ಸಾಂಸ್ಕೃತಿಕ ವೈಭವದ ದಸರಾ ಮಹೋತ್ಸವವಾಗಿದೆ. ಇದಕ್ಕೆ ಬೇಕಾದ ಸಿದ್ಧತೆಗಳು ನಡೆದಿವೆ ಎಂದು ರಂಭಾಪುರಿ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.