ADVERTISEMENT

3 ಅಧಿಕಾರಿಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 20:10 IST
Last Updated 5 ಫೆಬ್ರುವರಿ 2011, 20:10 IST

ಬೆಂಗಳೂರು: ಕರ್ತವ್ಯಲೋಪಕ್ಕಾಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬರು ಸಾರಿಗೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

 ಪಾನಮತ್ತರಾಗಿ ಕೃಷ್ಣಮೂರ್ತಿ ಎಂಬುವರ ಮೇಲೆ ದೌರ್ಜನ್ಯ ನಡೆಸಿದ್ದ ಸೋಲದೇವನಹಳ್ಳಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ಎಚ್.ವಿ.ವೆಂಕಟಾಚಲಯ್ಯ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಆದೇಶ ಹೊರಡಿಸಿದ್ದಾರೆ.

ಜನವರಿ 23ರಂದು ಪಾನಮತ್ತರಾಗಿ ಕಾರು ಚಾಲನೆ ಮಾಡುತ್ತಿದ್ದ ವೆಂಕಟಾಚಲಯ್ಯ ಅವರು ಪೀಣ್ಯ ಎಂಟನೇ ಮೈಲಿ ಸಮೀಪ ಕೃಷ್ಣಮೂರ್ತಿ ಅವರ ಕಾರಿಗೆ ವಾಹನ ಗುದ್ದಿಸಿದ್ದರು. ಈ ಸಂದರ್ಭದಲ್ಲಿ ವೆಂಕಟಾಚಲಯ್ಯ, ಕೃಷ್ಣಮೂರ್ತಿ ಅವರಿಗೆ ವಾಕಿಟಾಕಿಯಿಂದ ಹೊಡೆದು ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಜ.24ರಂದು ವರದಿ ಪ್ರಕಟಿಸಿತ್ತು.

ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿ ಕರ್ತವ್ಯ ಲೋಪ ತೋರಿದ ಆರೋಪದ ಮೇಲೆ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ.ಗೋಪಾಲ್ ಅವರನ್ನು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಅಮಾನತು ಮಾಡಿದ್ದಾರೆ. ಕಾಟನ್‌ಪೇಟೆ ಠಾಣೆ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಜ.15ರಂದು ರಾತ್ರಿ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿ, ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಅಪರಾಧ ಹಿನ್ನೆಲೆಯುಳ್ಳ ಮೂರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದಿದ್ದರೂ ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಲಾಗಿತ್ತು.

ಹೃದಯಾಘಾತದಿಂದ ಕುಸಿದು ಬಿದ್ದ ಬಿಎಂಟಿಸಿ ಬಸ್ ಚಾಲಕ ಮಲ್ಲಿಕಾರ್ಜುನ ಎಂಬುವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನ ನೀಡದೆ ನಿರ್ಲಕ್ಷ್ಯ ತೋರಿ ಅವರ ಸಾವಿಗೆ ಕಾರಣರಾದ ಡಿಪೊ ಸಂಖ್ಯೆ ಹತ್ತರ ಮೆಕಾನಿಕ್ ವಿಭಾಗದ ಜಿ.ಅಶೋಕ್ ಕುಮಾರ್ ಎಂಬುವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಶನಿವಾರ ಬೆಳಿಗ್ಗೆ ಐದು ಗಂಟೆಗೆ ಈ ಘಟನೆ ನಡೆದಾಗ ವಾಹನ ಸೌಲಭ್ಯ ಒದಗಿಸದ ಆರೋಪ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.