ADVERTISEMENT

‘ಯುವಿಸಿಇ’ ಅಭಿವೃದ್ಧಿಗೆ ₹30 ಕೋಟಿ ಸಂಗ್ರಹ ಗುರಿ: ಯುವಿಸಿಇ ಪದವೀಧರರ ಸಂಘ

ಯುವಿಸಿಇ ಪದವೀಧರರ ಸಂಘ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 20:01 IST
Last Updated 11 ಏಪ್ರಿಲ್ 2022, 20:01 IST
   

ಬೆಂಗಳೂರು: ‘ಸ್ವಾಯತ್ತ ಸಂಸ್ಥೆಯಾಗಿರುವ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಸರ್ವತೋಮುಖ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ₹30 ಕೋಟಿ ಸಂಗ್ರಹಿಸಲು ಉದ್ದೇಶಿಸಲಾಗಿದೆ’ ಎಂದು ಯುವಿಸಿಇ ಪದವೀಧರರ ಸಂಘದ ಅಧ್ಯಕ್ಷ ಮೇಜರ್ ಜನರಲ್ ನೀಲಕಂಠಪ್ಪ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಮೊದಲ ಎಂಜಿನಿಯರಿಂಗ್‌ ಕಾಲೇಜು ಎಂಬ ಹೆಗ್ಗಳಿಕೆ ಇರುವ ಯುವಿಸಿಇಯನ್ನು ಸ್ವಾಯತ್ತ ಸಂಸ್ಥೆಯಾಗಿ ಘೋಷಿಸಿರುವುದು ಸ್ವಾಗತಾರ್ಹ.ದಶಕದ ಈ ಬೇಡಿಕೆ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಧನ್ಯವಾದ’ ಎಂದರು.

‘ಯುವಿಸಿಇಗೆ ಮುಂಬರುವ ವರ್ಷಗಳಲ್ಲಿ ಭದ್ರ ಬುನಾದಿ ಹಾಕಬಲ್ಲ, ಕ್ರಿಯಾಶೀಲ, ಸಮರ್ಥ ನಾಯಕತ್ವದ ಅಗತ್ಯವಿದೆ. ಹಾಗಾಗಿ ಐಐಟಿ ಅಥವಾ ಐಐಎಸ್‌ಸಿ ಹಿನ್ನೆಲೆಯಿಂದ ಬಂದಂತಹ ಶಿಕ್ಷಣ ತಜ್ಞರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಯುವಿಸಿಇ ಹಳೆಯ ವಿದ್ಯಾರ್ಥಿಯೂ ಆಗಿರುವರಕ್ಷಣಾ ಸಚಿವಾಲಯದ ಮಾಜಿ ವೈಜ್ಞಾನಿಕ ಸಲಹೆಗಾರವಿ.ಕೆ.ಆತ್ರೆ, ‘ನಮ್ಮ ಅವಧಿಯಲ್ಲಿ ಅತ್ಯುತ್ತಮ ಅಧ್ಯಾಪಕರನ್ನು ಹೊಂದಿದ್ದೆವು. 80ರ ದಶಕದಲ್ಲಿ ಯುವಿಸಿಇ ತನ್ನ ಹೊಳಪು ಕಳೆದುಕೊಂಡಿತು. ಸರ್ಕಾರ ಎಲ್ಲ ರೀತಿಯಲ್ಲಿ ಕಾಲೇಜಿನ ಬೆಂಬಲಕ್ಕೆ ನಿಂತರೆ, ಹಳೆಯ ವಿದ್ಯಾರ್ಥಿಗಳು ಸಹಾಯ ಹಸ್ತ ಚಾಚಲು ಮುಂದೆ ಬರುತ್ತಾರೆ’ ಎಂದರು.

ಅಮೆರಿಕದಲ್ಲಿ ಉದ್ಯಮಿಯಾಗಿರುವ ಹಳೆಯ ವಿದ್ಯಾರ್ಥಿ ಗೋವಿಂದ ಲಕ್ಷ್ಮಣ್, ‘ಯುವಿಸಿಇ ಮೆಕ್ಯಾನಿಕಲ್ ವಿಭಾಗಕ್ಕೆ ಲ್ಯಾಬ್ ಉಪಕರಣಗಳೊಂದಿಗೆ ಹೊಸ ಕಟ್ಟಡದ ಅಗತ್ಯವಿದೆ.ಜಗತ್ತಿನಾದ್ಯಂತದ ಇರುವ ಯುವಿಸಿಇ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಕೊಡುಗೆ ನೀಡಲು ಆಸಕ್ತಿ ತೋರಿದ್ದಾರೆ’ ಎಂದರು.

ಸಂಘದ ಸದಸ್ಯ ಶ್ರೀಕಾಂತ್, ‘ಹಳೆಯ ವಿದ್ಯಾರ್ಥಿಗಳಿಗಾಗಿಶೀಘ್ರದಲ್ಲೇ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಮುದಾಯ ಮತ್ತು ಇತರೆ ಹಿತೈಷಿಗಳಿಂದ ಸಂಸ್ಥೆಯ ಅಭಿವೃದ್ಧಿಗಾಗಿ ನಿರೀಕ್ಷಿತ ಹಣ ಸಂಗ್ರಹಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

‘ಸಂಘದಲ್ಲಿ ಸುಮಾರು 1 ಸಾವಿರ ನೋಂದಾಯಿತ ಸದಸ್ಯರಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 70 ವಿದ್ಯಾರ್ಥಿಗಳಿಗೆ ಅಂದಾಜು ₹10 ಲಕ್ಷ ಮೌಲ್ಯದ ವಿದ್ಯಾರ್ಥಿವೇತನ ನೀಡಲು ಉದ್ದೇಶಿಸಲಾಗಿದೆ. ಹೆಚ್ಚಿನ ವಿವರಗಳಿಗೆwww.uvcega.org ಅಥವಾ9740111552 ಅನ್ನು ಸಂಪರ್ಕಿಸಬಹುದು’ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.