ಪ್ರಿಯಾಂಕ್ ಖರ್ಗೆ
ಬೆಂಗಳೂರು: ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2023ರಲ್ಲಿ 30 ರಾಷ್ಟ್ರಗಳ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ನವೋದ್ಯಮಗಳ ಪ್ರತಿನಿಧಿಗಳು ಮತ್ತು ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ನ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶೃಂಗಸಭೆಯನ್ನು ಉದ್ಘಾಟಿಸುವರು. ರಾಜ್ಯದ ಹಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು’ ಎಂದರು.
ಈ ಬಾರಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ‘ಬ್ರೇಕಿಂಗ್ ಬೌಂಡರೀಸ್– ಇನ್ನೋವೇಷನ್ ಫ್ರಂ ಇಂಡಿಯಾ ಇಂಪ್ಯಾಕ್ಟ್ ಫಾರ್ ವರ್ಲ್ಡ್’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ನಡೆಯಲಿದೆ. ಕಝಕಿಸ್ತಾನದ ಸಚಿವ ಬಗ್ದತ್ ಮುಸ್ಸಿನ್ ಹಾಗೂ ಇವಿಪಿ ಆ್ಯಂಡ್ ಸಿಟಿಒ ಕಂಪನಿಯ ವ್ಯವಸ್ಥಾಪಕ ಮಾರ್ಕ್ ಪೇಪರ್‌ಮಾಸ್ಟರ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಗಣ್ಯರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಪ್ರೊ ಕಾರ್ಯನಿರ್ವಾಹಕ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸೇರಿದಂತೆ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ವೈವಿಧ್ಯಮಯದ ಕಾರ್ಯಕ್ರಮ: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಂವಾದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಆವಿಷ್ಕಾರಗಳಿಗೆ ಸಂಬಂಧಿಸಿದ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.
ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಸೈಬರ್ ಯುದ್ಧ, 5–ಜಿ ತಂತ್ರಜ್ಞಾನದ ಅಳವಡಿಕೆ ಸೇರಿದಂತೆ ಭವಿಷ್ಯದ ಮುನ್ನೋಟ ಒದಗಿಸಬಲ್ಲ ಹಲವು ವಿಷಯಗಳು ಈ ಶೃಂಗಸಭೆಯ ಭಾಗವಾಗಿವೆ. ಸಮ್ಮೇಳನದ ಅಂಗವಾಗಿ ಎಸ್‌ಟಿಪಿಐ– ಐ.ಟಿ ರಫ್ತು ಪ್ರಶಸ್ತಿ, ಸ್ಮಾರ್ಟ್ ಬಯೋ ಪ್ರಶಸ್ತಿ, ಎಟಿಎಫ್ ಪ್ರಶಸ್ತಿ, ಗ್ರಾಮೀಣ ಐ.ಟಿ ರಸಪ್ರಶ್ನೆ ಸೇರಿದಂತೆ ಹಲವು ಪ್ರಶಸ್ತಿ, ಬಹುಮಾನಗಳ ಪ್ರದಾನ ನಡೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.