ADVERTISEMENT

30 ಸಾವಿರ ವೆಂಟಿಲೇಟರ್ ಸಿದ್ಧ: ಎಂ.ವಿ. ಗೌತಮ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 23:30 IST
Last Updated 14 ಆಗಸ್ಟ್ 2020, 23:30 IST
ಬಿಇಎಲ್ ತಯಾರಿಸಿದ ವೆಂಟಿಲೇಟರ್
ಬಿಇಎಲ್ ತಯಾರಿಸಿದ ವೆಂಟಿಲೇಟರ್   

ಬೆಂಗಳೂರು: ‘ಕೋವಿಡ್ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಅತ್ಯಲ್ಪ‍ ಅವಧಿಯಲ್ಲಿಯೇ ಯಶಸ್ವಿಯಾಗಿ 30 ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸಲಾಗಿದೆ’ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ (ಬಿಇಎಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಗೌತಮ್‌ ತಿಳಿಸಿದರು.

ಶುಕ್ರವಾರ ಇಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಗಸ್ಟ್‌ ಅಂತ್ಯದೊಳಗೆ 30 ಸಾವಿರ ವೆಂಟಿಲೇಟರ್ ತಯಾರಿಸಲು ಕಳೆದ ಎಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಸೂಚಿಸಿತ್ತು.ಮೈಸೂರಿನ ಸ್ಕ್ಯಾನ್‌ರೇ ಕಂಪನಿಯ ಪರವಾನಗಿಯಲ್ಲಿ ಇವುಗಳನ್ನು ತಯಾರಿಸಲಾಗಿದೆ. ವಿನ್ಯಾಸ ಮತ್ತು ತಂತ್ರಜ್ಞಾನದ ನೆರವನ್ನು ಡಿಆರ್‌ಡಿಒದಿಂದ ಪಡೆಯಲಾಗಿತ್ತು. ಈ ವೆಂಟಿಲೇಟರ್‌ಗಳು ತೀವ್ರ ನಿಗಾ ಘಟಕದಲ್ಲಿ ಬಳಸುವ ಸಿ.ವಿ 200 ಮಾದರಿಯದಾಗಿದ್ದು, ಅತ್ಯುತ್ತಮ ಗುಣಮಟ್ಟ ಹೊಂದಿವೆ. ತಯಾರಿಕೆ ಆರಂಭಿಸಿ, ಘಟಕದ ಸಾಮರ್ಥ್ಯ ಹೆಚ್ಚಿಸಿಕೊಂಡ ಬಳಿಕ ಪ್ರತಿನಿತ್ಯ 500ರಿಂದ 1,000 ವೆಂಟಿಲೇಟರ್‌ಗಳನ್ನು ಸಿದ್ಧಗೊಳಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ಲಾಕ್‌ ಡೌನ್ ಜಾರಿ ಇದ್ದಾಗಲೇ ತಯಾರಿಕೆ ಪ್ರಾರಂಭಿಸಿದೆವು. ವಿವಿಧ ಸರ್ಕಾರಿ ಸಂಸ್ಥೆಗಳು ಅಗತ್ಯ ಬೆಂಬಲ ನೀಡಿದವು. ಬೆಂಗಳೂರು ಘಟಕದಲ್ಲಿಯೇ ಎಲ್ಲ ವೆಂಟಿಲೇಟರ್‌ಗಳು ತಯಾರಿಸಲಾಗಿದ್ದು, ರಾಜ್ಯ ಸರ್ಕಾರವು ಹೆಚ್ಚಿನ ಸಹಕಾರ ನೀಡಿದೆ. ಲಾಕ್‌ ಡೌನ್ ಅವಧಿಯಲ್ಲಿದ್ದ ಅಡೆತಡೆಗಳನ್ನು ಕೂಡ ನಿವಾರಿಸಿ, ಉತ್ಪಾದನೆಗೆ ಪ್ರೋತ್ಸಾಹ ನೀಡಿತು. ವಿವಿಧ ಕೈಗಾರಿಕೆಗಳು ಕೂಡ ಬಿಡಿ ಭಾಗಗಳನ್ನು ಪೂರೈಕೆ ಮಾಡಿವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.