ADVERTISEMENT

4ರಂದು ಬಸ್ ದಿನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಇದೇ ತಿಂಗಳ 4 ರಂದು ಬಸ್ ದಿನವನ್ನಾಗಿ ಆಚರಿಸಲು ಸಿದ್ಧತೆ ನಡೆಸಿದೆ.

ನಗರದ ಸಂಚಾರ ದಟ್ಟಣೆ ಹಾಗೂ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ವೈಯಕ್ತಿಕ ಸಾರಿಗೆಯನ್ನು ಬದಿಗಿರಿಸಿ ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸುವ ಉದ್ದೇಶದಿಂದ ಬಿಎಂಟಿಸಿ ಪ್ರತಿ ತಿಂಗಳು ಒಂದು ದಿನ ಬಸ್ ದಿನವನ್ನಾಗಿ ಆಚರಿಸುತ್ತಿದೆ.

ಬುಧವಾರ (ಜ.4) ನಗರದ ಮುಖ್ಯ ರಸ್ತೆಗಳಾದ ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ, ಹೆಣ್ಣೂರು ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಗಳ್ಲ್ಲಲೂ ಬಸ್ ದಿನವನ್ನು ಆಚರಿಸಲಾಗುತ್ತಿದೆ.

ಸಂಸ್ಥೆಯ ಘಟಕಗಳಲ್ಲಿ ಲಭ್ಯವಿರುವ ಸುಮಾರು 100 ಹೆಚ್ಚುವರಿ ಬಸ್‌ಗಳನ್ನು ಈ ಮಾರ್ಗಗಳಲ್ಲಿ ಓಡಿಸಲಾಗುತ್ತಿದ್ದು, 800ರಷ್ಟು ಹೆಚ್ಚುವರಿ ಟ್ರಿಪ್‌ಗಳಲ್ಲಿ ಸಂಚರಿಸಲಿವೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಳೆದ ತಿಂಗಳು ನೂತನವಾಗಿ 80 ಯೂರೋ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ. ಜನವರಿ ತಿಂಗಳಲ್ಲಿ 20 ವೋಲ್ವೊ ವಾಹನಗಳನ್ನು ಹಾಗೂ 50 ಯೂರೋ ವಾಹನ ಸೇರ್ಪಡೆಗೊಳಿಸಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.