ADVERTISEMENT

4 ಪಥದ ಅಂಡರ್‌ಪಾಸ್: ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 18:50 IST
Last Updated 24 ಅಕ್ಟೋಬರ್ 2011, 18:50 IST

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಓಕಳಿಪುರ ಬಳಿ ಬಿಬಿಎಂಪಿ ಕೈಗೊಂಡಿರುವ ನಾಲ್ಕು ಪಥದ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಸಚಿವ ಎಸ್. ಸುರೇಶ್‌ಕುಮಾರ್ ಸೋಮವಾರ ಚಾಲನೆ ನೀಡಿದರು.

ಸುಮಾರು 10.62 ಕೋಟಿ ರೂಪಾಯಿ ವೆಚ್ಚದಲ್ಲಿ 240 ಮೀಟರ್ ಉದ್ದದ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಎಲಿಮೆಂಟ್ ಬಳಸಿ ನಿರ್ಮಾಣವಾಗಲಿರುವ ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ರ‌್ಯಾಂಪ್‌ಗಳು ತಲೆಯೆತ್ತಲಿವೆ ಎಂದು ಸಚಿವರ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸುರೇಶ್‌ಕುಮಾರ್, `ಓಕಳಿಪುರ ಕಡೆಯಿಂದ ಬರುವ ವಾಹನಗಳು ಸಂಚಾರ ದಟ್ಟಣೆಯಿಲ್ಲದೇ ನೇರವಾಗಿ ಮಾಗಡಿ ರಸ್ತೆ ಕಡೆಗೆ ಹೋಗುವ ವ್ಯವಸ್ಥೆ ಮಾಡಲಾಗಿದೆ. 90 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸದ್ಯದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಯಲಿದೆ~ ಎಂದರು.

`ಓಕಳಿಪುರ ವೃತ್ತದಲ್ಲಿ ಸಿಗ್ನಲ್‌ಮುಕ್ತ ಕಾರಿಡಾರ್ ನಿರ್ಮಾಣಕ್ಕೆ ಅಂತಿಮ ರೂಪ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯಲು ಹಾಗೂ ರೈಲ್ವೆ ಇಲಾಖೆಗೆ ಬದಲಿ ಸ್ಥಳ ನೀಡಿಕೆಗೆ ಸಂಬಂಧಪಟ್ಟಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ಪಾಲಿಕೆಯ ಮುಂದಿನ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಡಿಸೆಂಬರ್ ಮೊದಲ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು~ ಎಂದು ಹೇಳಿದರು. ಶಾಸಕ ದಿನೇಶ್ ಗುಂಡೂರಾವ್, ಸ್ಥಳೀಯ ಪಾಲಿಕೆ ಸದಸ್ಯೆ ಕ್ವೀನ್ ಎಲಿಜಬೆತ್ ಇತರರು ಉಪಸ್ಥಿತರಿದ್ದರು.

ಅಧಿಕೃತ ಕಾರ್ಯಕ್ರಮವಲ್ಲ?
ಓಕಳಿಪುರ ಬಳಿ ಅಂಡರ್‌ಪಾಸ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಸಂಬಂಧ ಸೋಮವಾರ ಯಾವುದೇ ಅಧಿಕೃತ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ. ಕಾಮಗಾರಿ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಗೆ ಸೇರಿದ 13 ಗುಂಟೆ ಪ್ರದೇಶವನ್ನು ವಶಕ್ಕೆ ಪಡೆಯಬೇಕಿತ್ತು.

ಈ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಔಪಚಾರಿಕವಾಗಿ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ಆಹ್ವಾನವನ್ನು ನೀಡಲಾಗಿತ್ತು.

ರೈಲ್ವೆ ಇಲಾಖೆಯ ಗೋಡೆ ತೆರವಿಗೆ ಮುಂದಾದ ಗುತ್ತಿಗೆದಾರರು ಸಾಂಕೇತಿಕವಾಗಿ ಪೂಜಾ ಕಾರ್ಯ ನಡೆಸಿದ್ದರು. ಇದನ್ನೇ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂಬುದಾಗಿ ಬಿಂಬಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
ಏಕೆಂದರೆ ಈ ಕಾರ್ಯಕ್ಕೆ ಮೇಯರ್ ಪಿ. ಶಾರದಮ್ಮ ಹಾಗೂ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಇತರರಿಗೆ ಆಹ್ವಾನವಿರಲಿಲ್ಲ.

`ರೈಲ್ವೆ ಇಲಾಖೆಯ ಕಾಂಪೌಂಡ್ ತೆರವು ಕಾರ್ಯಾಚರಣೆ ಆರಂಭವಾಗಿದೆಯೇ ಹೊರತು, ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿತವಾಗಿರಲಿಲ್ಲ~ ಎಂದು ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್. ರಾಮಚಂದ್ರ ಅವರು  `ಪ್ರಜಾವಾಣಿ~ಗೆ ತಿಳಿಸಿದರು.

ನವೆಂಬರ್‌ನಲ್ಲಿ ಆರಂಭ: `ಓಕಳಿಪುರ ಬಳಿ ಒಟ್ಟು 240 ಮೀಟರ್ ಉದ್ದದ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಸದ್ಯ ಕಾಂಪೌಂಡ್ ತೆರವು ಕಾರ್ಯ ಆರಂಭವಾಗಿದೆ. ಸರ್ವಿಸ್ ರಸ್ತೆ ನಿರ್ಮಿಸಿದ ಬಳಿಕ ಸಂಚಾರ ಬದಲಾವಣೆ ಮಾಡಿ ನಂತರ ಅಂಡರ್‌ಪಾಸ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ನವೆಂಬರ್ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸಲು ಉದ್ದೇಶಿಸಲಾಗಿದೆ~ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.