ADVERTISEMENT

400 ದಶಲಕ್ಷ ಲೀ ನೀರು ಸೋರಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST
400 ದಶಲಕ್ಷ ಲೀ ನೀರು ಸೋರಿಕೆ
400 ದಶಲಕ್ಷ ಲೀ ನೀರು ಸೋರಿಕೆ   

ಬೆಂಗಳೂರು: ಬೆಂಗಳೂರು ಜಲಮಂಡಲಿ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಿಂದ ಒಟ್ಟು 900 ದಶಲಕ್ಷ ಲೀಟರ್ ಕಾವೇರಿ ನೀರನ್ನು ಪೂರೈಕೆ ಮಾಡುತ್ತಿದ್ದರೂ ವಾಸ್ತವವಾಗಿ ನಗರಕ್ಕೆ ಪೂರೈಕೆಯಾಗುತ್ತಿರುವುದು ಕೇವಲ 500 ದಶಲಕ್ಷ ಲೀಟರ್ ಮಾತ್ರ!

ಉಳಿದ 400 ದಶಲಕ್ಷ ಲೀಟರ್ ನೀರು (ಶೇ 35) , ಸರಬರಾಜು ಹಂತದಲ್ಲಿಯೇ ಸೋರಿಕೆಯಾಗುತ್ತಿದೆ. ಅಕ್ರಮ ಸಂಪರ್ಕದಿಂದಾಗಿ ಶೇ 10ರಷ್ಟು ನೀರು ಇಲಾಖೆಯ ಲೆಕ್ಕಕ್ಕೆ ಸಿಗುತ್ತಿಲ್ಲ. ಹಳೆಯ ಮೀಟರ್‌ಗಳಿಂದ ಶೇ 5ರಷ್ಟು ಆದಾಯ ಜಲಮಂಡಲಿಗೆ ನಷ್ಟವಾಗುತ್ತಿದೆ.

ಶೇ 12ರಿಂದ 15ರಷ್ಟು ಪ್ರಮಾಣದ ನೀರು ಸಾರ್ವಜನಿಕ ನಲ್ಲಿಗಳ ಮೂಲಕ ಸರಬರಾಜು ಆಗುತ್ತಿದೆ. ಶೇ 3-5ರಷ್ಟು ಪ್ರಮಾಣದ ನೀರು ನೆಲಮಟ್ಟದ ಜಲ ಸಂಗ್ರಹಾಗಾರಗಳಲ್ಲಿ ಸೋರಿಕೆಯಾಗುತ್ತಿದೆ.

 ಪೂರೈಕೆ ಸಂದರ್ಭದಲ್ಲಿ ಶೇ 12-15ರಷ್ಟು ನೀರು ಸೋರಿಕೆಯಾಗುತ್ತಿದೆ. ಶೇ 10-15ರಷ್ಟು ನೀರು ಮನೆಗಳಿಗೆ ಸಂಪರ್ಕ ಕಲ್ಪಿಸುವಾಗ ನಷ್ಟವಾಗುತ್ತಿದೆ. ಶೇ 3ರಷ್ಟು ನೀರು ಜಲಮಂಡಲಿಯ ಎಲ್ಲ ಕಚೇರಿಗಳಿಗೆ ಹಾಗೂ ನೀರಿನ ಟ್ಯಾಂಕರ್‌ಗಳ ಮೂಲಕ ವಿವಿಧೆಡೆ ವಿತರಣೆಯಾಗುತ್ತದೆ.

ಈ ಕುರಿತು ಮಂಡಲಿಯ ಮಂಡಲಿಯ ಪ್ರಧಾನ ಎಂಜಿನಿಯರ್ ಟಿ.ವೆಂಕಟರಾಜು ಮಾತನಾಡಿ, `ನಗರದಲ್ಲಿ ಹಲವು ನೀರಿನ ಸಂಪರ್ಕಗಳನ್ನು ಕ್ರಮಬದ್ಧಗೊಳಿಸಬೇಕಿದೆ. ನಂತರವಷ್ಟೇ ಶುಲ್ಕವನ್ನು ನಿರೀಕ್ಷಿಸಲು ಸಾಧ್ಯ~ ಎಂದರು.

`ನಗರದಲ್ಲಿ ಹಲವು ನಲ್ಲಿ ಸಂಪರ್ಕಗಳನ್ನು ಚಾಲನೆಗೊಳಿಸಬೇಕಿದ್ದು, ಅವುಗಳ ಮೂಲಕ ಮಾತ್ರ ಮಂಡಲಿಯು ಶುಲ್ಕವನ್ನು ನಿರೀಕ್ಷಿಸಬಹುದಾಗಿದೆ. ಸುಮಾರು ಮೂರು ಲಕ್ಷ ಮೀಟರ್‌ಗಳನ್ನು ಬದಲಿಸಬೇಕಿದೆ. ಜೊತೆಗೆ ಮಂಡಲಿಯು ಪ್ರತಿವರ್ಷ 100 ಕಿ.ಮೀ. ದೂರದವರೆಗೆ ಹೊಸ ಪೈಪ್‌ಗಳನ್ನು ಜೋಡಿಸುತ್ತದೆ. ನೆಲಮಟ್ಟದ ಜಲಸಂಗ್ರಹಾಗಾರದಲ್ಲಿ ನೀರು ಸೋರಿಕೆಯನ್ನು ತಡೆಗಟ್ಟಲು ಮಧ್ಯಮ ಸಾಂದ್ರತೆಯ ಪಾಲಿಥಿಲೇನ್ ಪೈಪುಗಳನ್ನು ಹಂತ ಹಂತವಾಗಿ ಅಳವಡಿಸಲಾಗುವುದು~ ಎಂದು ಅವರು ತಿಳಿಸಿದರು.

ಸುಮಾರು 100 ಕಿ.ಮೀ. ದೂರದ ಟಿ.ಕೆ.ಹಳ್ಳಿಯಿಂದ 52 ಜಲಸಂಗ್ರಹಾಗಾರಗಳ ಮೂಲಕ ನಗರಕ್ಕೆ ನೀರನ್ನು ಪೂರೈಕೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.