ADVERTISEMENT

ಆಮ್ಲಜನಕ ವ್ಯವಸ್ಥೆಯ 45 ಹಾಸಿಗೆ ಎರಡೇ ದಿನಗಳಲ್ಲಿ ಸಜ್ಜು

​ಪ್ರಜಾವಾಣಿ ವಾರ್ತೆ
Published 1 ಮೇ 2021, 21:00 IST
Last Updated 1 ಮೇ 2021, 21:00 IST
ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾದ ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆಗಳು
ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾದ ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆಗಳು   

ಬೆಂಗಳೂರು: ಆಮ್ಲಜನಕ ಸಿಗದೆ ಪರದಾಡುತ್ತಿರುವ ಕೋವಿಡ್‌ ಪೀಡಿತರಿಗೆ ಅಧಿಕಾರಿಗಳು ಮನಸ್ಸು ಮಾಡಿದರೆ ತೀರಾ ಸಂಕಷ್ಟದ ಸಮಯದಲ್ಲೂ ತ್ವರಿತವಾಗಿ ನೆರವಾಗಬಹುದು ಎಂಬುದನ್ನು ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ. ನಾಗವಾರ ವಾರ್ಡ್‌ನ ಅಂಬೇಡ್ಕರ್‌ ಕಾಲೇಜಿನಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ 45 ಹಾಸಿಗೆಗಳೂ ಸೇರಿದಂತೆ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರವನ್ನು ಎರಡೇ ದಿನಗಳಲ್ಲಿ ಸಜ್ಜುಗೊಳಿಸಿದ್ದಾರೆ.

ಈ ಕೋವಿಡ್‌ ಆರೈಕೆ ಕೇಂದ್ರವನ್ನು ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್‌ ಶನಿವಾರ ಉದ್ಘಾಟಿಸಿದರು.

‘ನಾಗವಾರ ವಾರ್ಡ್‌ನಲ್ಲಿರುವ ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿನಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಇದರಲ್ಲಿ 45 ಹಾಸಿಗೆಗಳಿಗೆ ಕೊಳವೆ ಮೂಲಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಪೂರ್ವ ವಲಯದ ಜಂಟಿ ಆಯುಕ್ತರಾದ ಪಲ್ಲವಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಇಲ್ಲಿ ಒಂದಿಷ್ಟು ಮೂಲಸೌಕರ್ಯ ಮೊದಲೇ ಇತ್ತು. ಆಮ್ಲಜನಕ ಪೂರೈಕೆಗೆ ಹೊಸತಾಗಿ ಕೊಳವೆಗಳನ್ನು ಒದಗಿಸಲಾಗಿದೆ. ಎರಡೇ ದಿನಗಳಲ್ಲಿ ಈ ಕೋವಿಡ್‌ ಆರೈಕೆ ಕೇಂದ್ರವನ್ನು ಸಜ್ಜುಗೊಳಿಸಿದ್ದೇವೆ. ಎಚ್‌ಡಿಯು ಘಟಕಗಳ ಹಾಸಿಗೆಗಳಿಗೆ 10 ಲೀಟರ್‌ ಸಾಂದ್ರತೆಯ ಸಾಮರ್ಥ್ಯ ಆಮ್ಲಜನಕ ಪೂರೈಕೆ ಆಗುತ್ತದೆ. ಆದರೆ, ಇಲ್ಲಿನ ಹಾಸಿಗೆಗಳಿಗೆ 8 ಲೀ ಸಾಂದ್ರತೆಯ ಆಕ್ಸಿಜನ್‌ ಒದಗಿಸಲಾಗುತ್ತದೆ. ಆಮ್ಲಜನಕ ಸಿಗದೇ ಸಮಸ್ಯೆ ಎದುರಿಸುತ್ತಿರುವ ಕೋವಿಡ್‌ ರೋಗಿಗಳಿಗೆ ಈ ಆರೈಕೆ ಕೇಂದ್ರದಿಂದ ತುಂಬಾ ಅನುಕೂಲವಾಗಲಿದೆ’ ಎಂದು ಈ ಆರೈಕೆ ಕೇಂದ್ರದ ಉಸ್ತುವಾರಿ ಡಾ.ಸುನೀತಾ ವಿವರಿಸಿದರು.

‘ಇದೇ ವಲಯದ ವ್ಯಾಪ್ತಿಯಲ್ಲಿರುವ ಹೆಬ್ಬಾಳದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ 60 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಅವುಗಳಲ್ಲಿ 20 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಗೆ ರೋಗಿಗಳನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯೂ ಆರಂಭವಾಗಿದೆ’ ಎಂದು ಪಲ್ಲವಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.