ADVERTISEMENT

ಒಂದೇ ದಿನ 5 ಪ್ರಕರಣ

ಮತ್ತೆರಡು ಜಿಲ್ಲೆಗೆ ವಿಸ್ತರಿಸಿದ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 21:12 IST
Last Updated 21 ಮಾರ್ಚ್ 2020, 21:12 IST
   

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಒಂದೇ ದಿನ 5 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕು ಶಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮಾತನಾಡಿ, ‘ಬೆಂಗಳೂರಿನಲ್ಲಿ ಮೂವರು ಹಾಗೂ ಮೈಸೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ. 26 ಮಂದಿಯನ್ನು ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 625 ಮಂದಿಯನ್ನು ಮನೆಯಲ್ಲಿಯೇ ಪ್ರತ್ಯೇಕಿಸಿದ್ದೇವೆ’ ಎಂದರು.

‘ಮಾ.9ರಂದು ದುಬೈನಿಂದ ಬಂದಿದ್ದ 67 ವರ್ಷದ ಮಹಿಳೆ (11ನೇ ರೋಗಿ) ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷದ ಮಹಿಳೆಯೂ ಸೋಂಕು ಪೀಡಿತರಾಗಿರುವುದು ದೃಢಪಟ್ಟಿದೆ. ಮಾ.19ರಂದು ನೆದರ್‌ಲ್ಯಾಂಡ್‌ನಿಂದ ಬಂದಿದ್ದ 39 ವರ್ಷದ ವ್ಯಕ್ತಿ, ಮಾ. 17ರಂದು ಸ್ಕಾಟ್ ಲ್ಯಾಂಡ್ ನಿಂದ ಬಂದಿದ್ದ 21 ವರ್ಷದ ವ್ಯಕ್ತಿ, ಮಾ.14ರಂದು ಸೌದಿ ಅರೇಬಿಯಾದ ಮೆಕ್ಕಾ ಪ್ರವಾಸ ಮುಗಿಸಿ ಬಂದಿದ್ದ ಚಿಕ್ಕಬಳ್ಳಾಪುರದ 31 ವರ್ಷದ ವ್ಯಕ್ತಿ ಹಾಗೂ ಮಾ.19ರಂದು ದುಬೈನಿಂದ ಬಂದಿದ್ದ ಮೈಸೂರಿನ 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.