ADVERTISEMENT

₹ 5 ಕೋಟಿ ಮೌಲ್ಯದ ಆಭರಣ ನದಿ ದಡದಲ್ಲಿ ಹೂತಿಟ್ಟ ಕಳ್ಳ!

ಮನೆ, ಬ್ಯಾಂಕುಗಳಿಂದ ಚಿನ್ನ, ವಜ್ರ, ಪ್ಲಾಟಿನಂ ಆಭರಣ ದೋಚಿದ ಆರೋಪಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:47 IST
Last Updated 15 ಅಕ್ಟೋಬರ್ 2019, 19:47 IST

ಬೆಂಗಳೂರು: ಕುಖ್ಯಾತ ಅಂತರರಾಜ್ಯ ಕಳ್ಳನೊಬ್ಬನನ್ನು ಬಂಧಿಸಿರುವ ಬೊಮ್ಮನಹಳ್ಳಿ ಪೊಲೀಸರು, ಆರೋಪಿಯಿಂದ ₹ 5 ಕೋಟಿ ಮೌಲ್ಯದ 12 ಕೆ.ಜಿ ತೂಕದ ಚಿನ್ನ, ವಜ್ರ ಹಾಗೂ ಪ್ಲಾಟಿನಂ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ತಿರುಚಿಯ ತಿರುವಂಬೂರು ಗ್ರಾಮದ ಮುರುಗನ್ (45) ಬಂಧಿತ ಆರೋಪಿ. ಈತ ನೀಡಿದ ಹೇಳಿಕೆ ಆಧರಿಸಿ ತಿರುಚಿ ಬಳಿಯ ನದಿ ದಡದಲ್ಲಿರುವ ಪೊದೆಯೊಂದರ ಬಳಿ ನೆಲದಲ್ಲಿ ಹೂತಿಟ್ಟಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸಹಚರರೊಡನೆ ಬೆಂಗಳೂರು, ತಮಿಳುನಾಡಿನ ತಿರುಚಿ ಹಾಗೂ ಆಂಧ್ರ ಪ್ರದೇಶದ ವಿವಿಧ ಕಡೆ ಮನೆಗಳಲ್ಲಿ ಕಳವು, ಬ್ಯಾಂಕ್‍ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ, ಭಾರಿ ಪ್ರಮಾಣದ ಚಿನ್ನಾಭರಣ ದೋಚಿರುವ ಬಗ್ಗೆ ಆರೋಪಿ ಬಾಯಿಬಿಟ್ಟಿದ್ದಾನೆ.

ADVERTISEMENT

ಎಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ ಹಾಗೂ ನಗರದ ವಿವಿಧ ವ್ಯಾಪ್ತಿಗಳಲ್ಲಿ ಕನ್ನಗಳವು ನಡೆಸಿದ್ದನಲ್ಲದೆ ತಮಿಳುನಾಡಿನ ತಿರುಚಿನಗರದ ಪೋರ್ಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲಲಿತ ಜುವೆಲ್ಸ್ ಕಳವು ಹಾಗೂ ತಿರುಚಿ ಜಿಲ್ಲೆಯ ಕೊಲ್ಲಿಡ್ಯಾಂ ಠಾಣೆ ವ್ಯಾಪ್ತಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಕಳವು ಸೇರಿ ತಮಿಳುನಾಡಿನ ಇತರೆ ಕಡೆಗಳಲ್ಲೂ ಕಳವು ನಡೆಸಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಅಲ್ಲದೆ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಬ್ಯಾಂಕ್ ಕಳವು ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು ನಗರದ ಬಾಣಸವಾಡಿ, ಮಡಿವಾಳ, ಎಚ್‍ಎಸ್‍ಆರ್ ಲೇಔಟ್, ಅಮೃತಹಳ್ಳಿ ಠಾಣೆ ವ್ಯಾಪ್ತಿಗಳಲ್ಲಿ ಮಾಡಿದ್ದ ಕಳವು ಪ್ರಕರಣಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮತ್ತು ಆನೇಕಲ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಜೊತೆಗೆ ಕಳವು ಮಾಡಿದ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಟವೇರಾ ಕಾರು ವಶಪಡಿಸಿಕೊಳ್ಳಲಾಗಿದೆ. ಇತರ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.