ADVERTISEMENT

5 ಆಸ್ಪತ್ರೆಗಳಿಗೆ ಸ್ಥಳದಲ್ಲೇ ನೋಟಿಸ್ ಜಾರಿ

ಬಿಬಿಎಂಪಿ ಮುಖ್ಯ ಆಯುಕ್ತರಿಂದ ಆಸ್ಪತ್ರೆಗಳ ದಿಢೀರ್ ತಪಾಸಣೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 19:16 IST
Last Updated 18 ಏಪ್ರಿಲ್ 2021, 19:16 IST

ಬೆಂಗಳೂರು: ಆಸ್ಪತ್ರೆಗಳಲ್ಲಿ ಸರ್ಕಾರಿ ಆದೇಶದಂತೆ ಶೇ 50‌ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರು ಭಾನುವಾರ ನಗರದ ಕೆಲವು ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದರು.

ವಿಕ್ರಂ, ಪೋರ್ಟಿಸ್, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳು ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿರಲಿಲ್ಲ. ಈ ಐದು ಆಸ್ಪತ್ರೆಗಳಿಗೆ ಮುಖ್ಯ ಆಯುಕ್ತರು ಸ್ಥಳದಲ್ಲೇ ನೋಟಿಸ್‌ ಜಾರಿಗೊಳಿಸಿ ಸಮಜಾಯಿಷಿ ನೀಡುವಂತೆ ಸೂಚಿಸಿದರು. 24 ಗಂಟೆಗಳ ಒಳಗೆ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಒದಗಿಸದಿದ್ದರೆ ಕೆಪಿಎಂಇ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವಿಕ್ರಂ ಆಸ್ಪತ್ರೆಯಲ್ಲಿ 39 ಹಾಸಿಗೆಗಳು ಹಾಗೂ ಪೋರ್ಟಿಸ್ ಆಸ್ಪತ್ರೆ 30 ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟು ಈ ಕುರಿತ ಸೂಚನಾ ಫಲಕವನ್ನು ಪ್ರವೇಶದ್ವಾರದ ಮುಂದೆ ಅಳವಡಿಸಬೇಕಿದೆ. ಆದರೆ ಈ ಎರಡು ಆಸ್ಪತ್ರೆಗಳೂ ಸರಿಯಾದ ಮಾಹಿತಿ ನೀಡಿರದೇ ಇರುವುದು ತಪಾಸಣೆ ವೇಳೆ ಕಂಡುಬಂತು.

ADVERTISEMENT

ಆಸ್ಟರ್ ಸಿ.ಎಂ.ಐ ಆಸ್ಪತ್ರೆ 112 ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕಿರುತ್ತದೆ. ಆದರೆ ಶೇ. 20ರಷ್ಟು ಸಾಮಾನ್ಯ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ವ್ಯವಸ್ಥೆಯವು ಸೇರಿ ಒಟ್ಟು 45 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿತ್ತು. ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಬದಲು 15 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿತ್ತು. ಬ್ಯಾಪ್ಟಿಸ್ಟ್ ಆಸ್ಪತ್ರೆಯು 124 ಹಾಸಿಗೆಗಳ ಬದಲು 63 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿತ್ತು.

‘ಇಂದು ಸಾಂಕೇತಿಕವಾಗಿ 5 ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಸ್ಪತ್ರೆಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಿದ್ದೇನೆ’ ಎಂದು ಗೌರವ ಗುಪ್ತ ತಿಳಿಸಿದರು.

ವಲಯ ಆಯುಕ್ತ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.