ADVERTISEMENT

ಯೋಗ ದಿನ: 'ಯೋಗ ಸಂಗಮ’ದಲ್ಲಿ 5 ಲಕ್ಷ ಮಂದಿ ಯೋಗಾಭ್ಯಾಸ

ಆಯುಷ್ ಇಲಾಖೆಯಿಂದ ವಿವಿಧ ಕಾರ್ಯಕ್ರಮ ಆಯೋಜನೆ: ವಿಧಾನಸೌಧದ ಆವರಣದಲ್ಲಿ 3 ಸಾವಿರ ಮಂದಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:52 IST
Last Updated 17 ಜೂನ್ 2025, 15:52 IST
ಯೋಗ ದಿನ ಕಾರ್ಯಕ್ರಮಗಳ ಕಿರು ಹೊತ್ತಿಗೆಯನ್ನು ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು. ವಿಪಿನ್ ಸಿಂಗ್ ಉಪಸ್ಥಿತರಿದ್ದರು
ಯೋಗ ದಿನ ಕಾರ್ಯಕ್ರಮಗಳ ಕಿರು ಹೊತ್ತಿಗೆಯನ್ನು ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು. ವಿಪಿನ್ ಸಿಂಗ್ ಉಪಸ್ಥಿತರಿದ್ದರು   

ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆಯು ಇದೇ 21ರಂದು ಬೆಳಿಗ್ಗೆ 6ರಿಂದ 8 ಗಂಟೆವರೆಗೆ ರಾಜ್ಯದ ವಿವಿಧೆಡೆ ‘ಯೋಗ ಸಂಗಮ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಡಿ 5 ಲಕ್ಷಕ್ಕೂ ಅಧಿಕ ಮಂದಿ ಯೋಗಾಭ್ಯಾಸ ಮಾಡಲಿದ್ದಾರೆ. 

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮ ವಿಧಾನಸೌಧದ ಆವರಣದಲ್ಲಿ ನಡೆಯಲಿದೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಸಚಿವರು, ಸಂಸದರು ಭಾಗವಹಿಸುತ್ತಾರೆ. ಚಲನಚಿತ್ರ ತಾರೆಯರಿಗೂ ಆಹ್ವಾನ ನೀಡಲಾಗಿದೆ. 7 ಗಂಟೆಯಿಂದ 7.45ರವರೆಗೆ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ವಿಧಾನಸೌಧದ ಆವರಣದಲ್ಲಿ 3 ಸಾವಿರ ಮಂದಿ ಯೋಗಾಭ್ಯಾಸ ಮಾಡುತ್ತಾರೆ. ಇದೇ ವೇಳೆ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳು, 360 ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಯೋಗಾಭ್ಯಾಸ ನಡೆಯಲಿದೆ’ ಎಂದು ತಿಳಿಸಿದರು.

‘ಯೋಗದಿನದಂದು ಮೈಸೂರಿನಲ್ಲಿಯೂ ಬೃಹತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ‘ಯೋಗ ಮಹಾಕುಂಭ’ ಶೀರ್ಷಿಕೆಯಡಿ ಮೈಸೂರು ಅರಮನೆ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, 15 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ವಿವರಿಸಿದರು.

ADVERTISEMENT

ವರ್ಷವಿಡೀ ಯೋಗಾಭ್ಯಾಸ: ‘ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜುಲೈ ಅಂತ್ಯದವರೆಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ‘ಯೋಗ ಪಾರ್ಕ್’ ಕಾರ್ಯಕ್ರಮದಡಿ ಬೆಂಗಳೂರು ಹಾಗೂ ಜಿಲ್ಲೆಗಳಲ್ಲಿರುವ ಉದ್ಯಾನಗಳಲ್ಲಿ ಯೋಗ ಸಂಬಂಧಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮ ವರ್ಷವಿಡೀ ನಡೆಯಲಿದೆ’ ಎಂದು ಸಚಿವರು ಹೇಳಿದರು. 

‘ಹಸಿರು ಯೋಗ ಕಾರ್ಯಕ್ರಮದಡಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ 5 ಲಕ್ಷ ಗಿಡಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ ಈ ಕಾರ್ಯ ಮಾಡಲಾಗುವುದು’ ಎಂದರು.

ಆಯುಷ್ ಇಲಾಖೆ ಆಯುಕ್ತ ವಿಪಿನ್ ಸಿಂಗ್ ಉಪಸ್ಥಿತರಿದ್ದರು.

‘ಯೋಗ ಜಿಲ್ಲೆ ಪ್ರಸ್ತಾವ ಸಲ್ಲಿಕೆ’:

‘ಮೈಸೂರನ್ನು ಯೋಗ ಜಿಲ್ಲೆಯೆಂದು ಘೋಷಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮವಹಿಸಿದ್ದೇವೆ. ಜಿಲ್ಲೆಯ ಪ್ರತಿಯೊಂದು ಮನೆಯವರೂ ಯೋಗಾಭ್ಯಾಸ ಮಾಡುವಂತಾಗಬೇಕು. ಮುಂದಿನ ಎರಡು ಮೂರು ವರ್ಷಗಳಲ್ಲಿ ಈ ಗುರಿ ಸಾಕಾರ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಇದು ಸಾಧ್ಯವಾದರೆ ದೇಶದ ಪ್ರಥಮ ಯೋಗ ಜಿಲ್ಲೆ ಮೈಸೂರು ಆಗಲಿದೆ. ಕರ್ನಾಟಕಕ್ಕೂ ಯೋಗಕ್ಕೂ ಹತ್ತಿರದ ಸಂಬಂಧವಿದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.