ನಗರದಲ್ಲಿ ನವಕರ್ನಾಟಕ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಡದಿಂದ ಮಾಲ್ಸಾವ್ಮಿ ಜೇಕಬ್ ಹಾಗೂ ಭೂಮಿಕಾ ಆರ್. ಅವರು ಕುಶಲೋಪರಿಯಲ್ಲಿ ತೊಡಗಿದ್ದರು. ಜಿ. ರಾಮಕೃಷ್ಣ, ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ದೆಹಲಿಯ ಮಹಾಪ್ರಭುಗಳು ಈಶಾನ್ಯ ರಾಜ್ಯಗಳ ಯುವಕರಿಗೆ 50 ಸಾವಿರ ಉದ್ಯೋಗಗಳನ್ನು ಕೊಡಿಸುವ ಹೇಳಿಕೆ ಘೋಷಣೆಗಷ್ಟೇ ಸೀಮಿತವಾಗಿದ್ದು, ಇದುವರೆಗೂ ಅನುಷ್ಠಾನವಾಗಿಲ್ಲ’ ಎಂದು ಸಾಹಿತಿ ಜಿ. ರಾಮಕೃಷ್ಣ ಹೇಳಿದರು.
ನವಕರ್ನಾಟಕ ಪ್ರಕಾಶನ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂಮಿಕಾ ಆರ್. ಅವರು ಅನುವಾದಿಸಿದ ‘ಜೊರಾಮಿ’ ಪುಸ್ತಕವನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ದೇಶವು ಮೇಕ್ ಇನ್ ಇಂಡಿಯಾದಿಂದ ಪ್ರಾರಂಭವಾಗಿ ವಿಕಸಿತ ಭಾರತದತ್ತ ಸಾಗುತ್ತಿದೆ. ಆದರೆ, ಎಷ್ಟು ವಿಕಸಿತಗೊಂಡಿದೆ ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.
‘ಸ್ವಾಯತ್ತ, ಸ್ವಾತಂತ್ರ್ಯಕ್ಕಾಗಿ ಹಾಗೂ ಪ್ರತ್ಯೇಕ ರಾಜ್ಯದ ಸ್ಥಾನಮಾನ ಪಡೆಯಲು ಮಿಜೋರಾಂನಲ್ಲಿ ಅನೇಕ ವರ್ಷಗಳ ಕಾಲ ಹೋರಾಟ ನಡೆಯಿತು. ಈ ಹೋರಾಟ ಹತ್ತಿಕ್ಕಲು ನಮ್ಮ ಸೈನ್ಯವನ್ನು ನಿಯೋಜಿಸಲಾಗಿತ್ತು. ಈ ಚಳವಳಿಯ ಸಂಪೂರ್ಣ ಚಿತ್ರಣ ಜೊರಾಮಿ ಪುಸ್ತಕದಲ್ಲಿದೆ’ ಎಂದರು.
‘ಇತ್ತೀಚೆಗೆ ಮಣಿಪುರ ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಸ್ವಾತಂತ್ರ್ಯವೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಆಗುತ್ತಿವೆ. ಇದನ್ನು ಪ್ರಶ್ನಿಸಿದವರಿಗೆ ನಗರ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ದೂರಿದರು.
ಪುಸ್ತಕದ ಕುರಿತು ನಿವೃತ್ತ ಉಪನ್ಯಾಸಕಿ ಶೈಲಜಾ ಮಾತನಾಡಿದರು. ನಂತರ ಜೊರಾಮಿ ಪುಸ್ತಕದ ಮೂಲ ಲೇಖಕಿ ಮಾಲ್ಸಾವ್ಮಿ ಜೇಕಬ್ ಅವರೊಂದಿಗೆ ಪತ್ರಕರ್ತ ಡಿ. ಉಮಾಪತಿ ಅವರು ಸಂವಾದ ನಡೆಸಿದರು.
ಹೊಸತು ಪತ್ರಿಕೆಯ ಸಿದ್ದನಗೌಡ ಪಾಟೀಲ, ಲೇಖಕಿ ಆರ್.ಭೂಮಿಕಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.