ಬೆಂಗಳೂರು: ಸರ್ವಜ್ಞನಗರ, ಎಚ್‌ಬಿಆರ್ ಲೇಔಟ್, ಬಾಣಸವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಗುಣಮಟ್ಟದ ವಿದ್ಯುತ್ ಒದಗಿಸುವ ಹೊಸ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಶುಕ್ರವಾರ ಎಚ್‌ಬಿಆರ್ ಸ್ಟೇಷನ್‌ನಲ್ಲಿ ಚಾಲನೆ ನೀಡಿದರು.
ಎಚ್‌ಬಿಆರ್ ಜಿಐಎಸ್ ವಿದ್ಯುತ್ ಕೇಂದ್ರದಿಂದ ಪಾಟರಿ ರಸ್ತೆ ವಿದ್ಯುತ್ ಉಪ ಕೇಂದ್ರಕ್ಕೆ ಸುಮಾರು 5.18 ಕಿ.ಮೀ. ಉದ್ದದ ಏಕಮಾರ್ಗ 1000 ಚದರ ಮಿ.ಮೀ. ಭೂಗತ ಕೇಬಲ್ಅನ್ನು ಕೆಪಿಟಿಸಿಎಲ್ ಅಳವಡಿಸಿದೆ ಎಂದು ಇಂಧನ ಸಚಿವರು ತಿಳಿಸಿದರು.
ಈಗಿರುವ ಪಾಟರಿ ರಸ್ತೆ ವಿದ್ಯುತ್ ಉಪಕೇಂದ್ರಕ್ಕೆ ಐಟಿಐ ವಿದ್ಯುತ್ ಉಪಕೇಂದ್ರದಿಂದ ದ್ವಿಮಾರ್ಗ ಪ್ರಸರಣ ಮಾರ್ಗ ಸಂಪರ್ಕದಲ್ಲಿದ್ದು, ಈ ಉಪಕೇಂದ್ರದಿಂದ ಸರ್ವಜ್ಞನಗರ, ಎಚ್‌ಬಿಆರ್ ಲೇಔಟ್, ನಾಗವಾರ, ಬಾಣಸವಾಡಿ, ಕಮ್ಮನಹಳ್ಳಿ, ಕಾಡಗೊಂಡನಹಳ್ಳಿ, ಲಿಂಗರಾಜಪುರ, ಅರೇಬಿಕ್ ಕಾಲೇಜು, ಟ್ಯಾನರಿ ರಸ್ತೆ, ಡೀವಿಸ್ ರಸ್ತೆ, ಪುಲಕೇಶಿನಗರ ಮತ್ತು ದಂಡು ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಇತರ ಪ್ರದೇಶಗಳಿಗೆ ಕೈಗಾರಿಕೆ, ವಾಣಿಜ್ಯ ಹಾಗೂ ಗೃಹಬಳಕೆಯ ಉದ್ದೇಶಗಳಿಗಾಗಿ ವಿದ್ಯುತ್ ಒದಗಿಸಲಾಗುತ್ತಿದೆ ಎಂದರು.
ಪಾಟರಿ ವಿದ್ಯುತ್ ಉಪಕೇಂದ್ರಕ್ಕೆ ಮುಖ್ಯ ಹಾಗೂ ಪರ್ಯಾಯ ಪ್ರಸರಣಾ ಮಾರ್ಗದ ವ್ಯವಸ್ಥೆಗಳಾಗಿರುವುದರಿಂದ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಒದಗಿಸಲು ನೆರವಾಗಲಿದೆ. ₹39.05 ಕೋಟಿ ವೆಚ್ಚದ ಈ ಯೋಜನೆಯಿಂದ 17.603 ಮಿಲಿಯನ್ ಯೂನಿಟ್ ವಾರ್ಷಿಕ ಇಂಧನ ಉಳಿತಾಯವಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.