ADVERTISEMENT

ಸರ್ಕಾರಿ ಜಮೀನು ಅಡವಿಟ್ಟು ₹ 52 ಕೋಟಿ ಸಾಲ ಪಡೆದು ವಂಚನೆ: ಎಸಿಬಿಯಿಂದ ತನಿಖೆ

ತ್ಯಾಜ್ಯ ಸಂಸ್ಕರಣೆ ಗುತ್ತಿಗೆ ಕಂಪನಿ, ನಿವೃತ್ತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ ಎಸಿಬಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 17:50 IST
Last Updated 8 ಸೆಪ್ಟೆಂಬರ್ 2020, 17:50 IST
ಎಸಿಬಿ
ಎಸಿಬಿ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನತ್ಯಾಜ್ಯ ಬಳಸಿ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಸರ್ಕಾರದಿಂದ ಪಡೆದ ಜಮೀನನ್ನು ಬ್ಯಾಂಕ್‌ಗಳಿಗೆ ಅಡವಿಟ್ಟು ₹ 52.75 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪದ ಮೇಲೆ ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಕಂಪನಿ ಮತ್ತು ಅದಕ್ಕೆ ಸಹಕರಿಸಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ಆರಂಭಿಸಿದೆ.

ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಬಿಂಗಿ ಮನೆ, ಕಂಪನಿಯ ಕಚೇರಿ ಹಾಗೂ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪ ಎದುರಿಸುತ್ತಿರುವ ಬಿಬಿಎಂಪಿ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಲಿಂಗೇಗೌಡ ಮತ್ತು ನಿವೃತ್ತ ಸಹಾಯಕ ಎಂಜಿನಿಯರ್‌ ಚನ್ನಕೇಶವ ಎಚ್‌.ಆರ್‌. ಅವರ ಮನೆಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.

ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆ ಅನುಷ್ಠಾನಕ್ಕೆ ಪಾಲಿಕೆಯು 2002ರ ಡಿಸೆಂಬರ್‌ 18ರಂದು ಅಧಿಸೂಚನೆ ಹೊರಡಿಸಿತ್ತು. 2005ರ ಜೂನ್‌ 24ರಂದು ಶ್ರೀನಿವಾಸ ಗಾಯತ್ರಿ ರಿಸೋರ್ಸ್‌ ರಿಕವರಿ ಕಂಪನಿ ಜತೆ ಪಾಲಿಕೆ ಒಪ್ಪಂದ ಮಾಡಿಕೊಂಡಿತ್ತು. ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆಗೆ 35 ಎಕರೆ ಜಮೀನನ್ನು ಸರ್ಕಾರದಿಂದ ನೀಡಲಾಗಿತ್ತು. 2006ರ ನವೆಂಬರ್‌ 5ರ ಒಳಗಾಗಿ ಘಟಕ ನಿರ್ಮಿಸಿ, ವಿದ್ಯುತ್‌ ಉತ್ಪಾದನೆ ಆರಂಭಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

ADVERTISEMENT

ಆದರೆ, ಗುತ್ತಿಗೆದಾರ ಕಂಪನಿ ಘನತ್ಯಾಜ್ಯವನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡಿರಲೇ ಇಲ್ಲ. ತ್ಯಾಜ್ಯವನ್ನು ಭೂಮಿಯಲ್ಲಿ ಹೂಳುತ್ತಿತ್ತು. ಇದರಿಂದ ಮಂಡೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಾಲಿನ್ಯಕ್ಕೆ ಕಾರಣವಾಗಿತ್ತು. ಈ ಸಂಬಂಧ ಪರಿಶೀಲನೆ ನಡೆಸಿದ್ದ ಪಾಲಿಕೆಯು 2014ರ ಸೆಪ್ಟೆಂಬರ್‌ 14ರಂದು ಗುತ್ತಿಗೆಯನ್ನು ರದ್ದುಪಡಿಸಿತ್ತು.

ವಂಚನೆ ಪತ್ತೆ: ಪ್ರಕರಣದ ಕುರಿತು ಎಸಿಬಿ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಘನ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಮಾಡಲು ಘಟಕ ನಿರ್ಮಾಣಕ್ಕೆ ಸರ್ಕಾರ ಹಂಚಿಕೆ ಮಾಡಿದ್ದ ಜಮೀನನ್ನು ಕಂಪನಿಯು ಬ್ಯಾಂಕ್‌ಗಳಲ್ಲಿ ಅಡವಿಟ್ಟು ₹ 52.75 ಕೋಟಿ ಸಾಲ ಪಡೆದು ವಂಚಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇದೇ ಅವಧಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡದೇ ಪಾಲಿಕೆಯಿಂದ ₹ 4.61 ಕೋಟಿ ಶುಲ್ಕವನ್ನೂ ಪಡೆದಿರುವುದು ಬೆಳಕಿಗೆ ಬಂದಿದೆ.

‘ಸರ್ಕಾರ ನಿರ್ದಿಷ್ಟ ಉದ್ದೇಶಕ್ಕೆ ನೀಡಿದ್ದ ಜಮೀನನ್ನು ಗುತ್ತಿಗೆದಾರ ಕಂಪನಿಯು ಬ್ಯಾಂಕ್‌ಗಳಲ್ಲಿ ಅಡವಿಟ್ಟು ಸಾಲ ಪಡೆದು ವಂಚಿಸಿದೆ. ಪಾಲಿಕೆಯ ಅಧಿಕಾರಿಗಳು ಕಂಪನಿ ಜತೆ ಶಾಮೀಲಾಗಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಘನ ತ್ಯಾಜ್ಯ ಸಂಸ್ಕರಣೆಯನ್ನೇ ಮಾಡದ ಕಂಪನಿಗೆ ₹ 4.61 ಕೋಟಿ ಶುಲ್ಕವನ್ನು ಅಕ್ರಮವಾಗಿ ಪಾವತಿಸಿದ್ದಾರೆ. ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ತನಿಖೆ ಆರಂಭಿಸಲಾಗಿದೆ. ಎಸಿಬಿಯ ನಾಲ್ಕು ತಂಡಗಳು ಶೋಧ ನಡೆಸುತ್ತಿವೆ’ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.