ADVERTISEMENT

534 ಹುದ್ದೆಗಳು ಪಾಲಿಕೆಯಲ್ಲಿ ವಿಲೀನ

ಪಾಲಿಕೆಗೆ 110 ಹಳ್ಳಿಗಳ ಸೇರ್ಪಡೆ ಬಳಿಕ ಸೃಷ್ಟಿಯಾಗಿದ್ದ ಅತಂತ್ರ ಸ್ಥಿತಿಗೆ ಕೊನೆಗೂ ಮುಕ್ತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 22:31 IST
Last Updated 17 ಫೆಬ್ರುವರಿ 2021, 22:31 IST
   

ಬೆಂಗಳೂರು: ಬಿಬಿಎಂಪಿಗೆ 2007ರಲ್ಲಿ ಸೇರ್ಪಡೆಯಾಗಿದ್ದ 110 ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿ ಮತ್ತು ಡಿ ಗುಂಪುಗಳ ನೌಕರರ ಅತಂತ್ರ ಸ್ಥಿತಿಗೆ 14 ವರ್ಷಗಳ ಬಳಿಕ ಮುಕ್ತಿ ಸಿಕ್ಕಿದೆ.

ಅಧಿಕೃತವಾಗಿ ಬಿಬಿಎಂಪಿಗೆ ಸೇರ್ಪಡೆಗೊಳ್ಳಬೇಕಿದ್ದ 560 ಸಿಬ್ಬಂದಿಗಳಲ್ಲಿ 534 ಮಂದಿಯನ್ನು ಪಾಲಿಕೆ ತೆಕ್ಕೆಗೆ ಸೇರ್ಪಡೆಗೊಳಿಸಲಾಗಿದೆ. ಇವರಲ್ಲಿ ದ್ವಿತೀಯ ದರ್ಜೆ ಸಹಾಯಕರು, ಪ್ಲಂಬರ್‌, ಅಂಗನವಾಡಿ ಸಹಾಯಕಿ, ಎಲೆಕ್ಟ್ರಿಶಿಯನ್‌ಗಳು, ಜಲಗಾರರು, ಪಂಪ್‌ ಆಪರೇಟರ್‌, ಮೆಕ್ಯಾನಿಕ್‌. ಪೌರಕಾರ್ಮಿಕರು, ಕಚೇರಿಯಲ್ಲಿ ಕಸ ಗುಡಿಸುವವರು, ಕರವಸೂಲಿಗಾರರು, ಕಂಪ್ಯೂಟರ್‌ ನಿರ್ವಾಹಕರು, ಟೈಪಿಸ್ಟ್‌, ಕಚೇರಿ ಸಹಾಯಕರು ಸೇರಿದ್ದಾರೆ.

ಈ ಸಿಬ್ಬಂದಿಯ ವಿಲೀನದ ಕುರಿತು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು 2020ರ ನ. 27ರಂದು ಮಂಡಿಸಿದ್ದ ನಿರ್ಣಯವನ್ನು ಆಡಳಿತಾಧಿಕಾರಿ ಗೌರವ ಗುಪ್ತ ಅನುಮೋದಿಸಿದ್ದಾರೆ. ಈ ಹುದ್ದೆಗಳು ಬಿಬಿಎಂಪಿಯಲ್ಲಿ ಇಲ್ಲದೇ ಇದ್ದರೆ ತತ್ಸಮಾನ ಹುದ್ದೆಗಳಿಗೆ ಅವರನ್ನು ನಿಯೋಜಿಸುವಂತೆ ಸೂಚಿಸಲಾಗಿದೆ. ಬಿಬಿಎಂಪಿಯಲ್ಲಿ ವಿಲೀನವಾಗಲು ಬಯಸದವರು ಮಾತೃ ಇಲಾಖೆಗೆ ಮರಳಬಹುದೂ ಎಂದೂ ತಿಳಿಸಲಾಗಿದೆ

ADVERTISEMENT

ಒಟ್ಟು 560 ಮಂದಿ ನೌಕರರು ಬಿಬಿಎಂಪಿಗೆ ಸೇರ್ಪಡೆಯಾಗಬೇಕಿತ್ತು. ಅವರಲ್ಲಿ ಬೊಮ್ಮನಹಳ್ಳಿ ವಲಯದ ನಾಲ್ವರು ನೌಕರರನ್ನು ಕ್ರಮಸಂಖ್ಯೆ ವ್ಯತ್ಯಾಸದ ಕಾರಣಕ್ಕೆ ಸೇರ್ಪಡೆಗೊಳಿಸ ಲಾಗಿಲ್ಲ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಸೂಚನೆ ಮೇರೆಗೆ 22 ಮಂದಿಯ ಸರ್ಪಡೆಯನ್ನು ಕೈಬಿಡಲಾಗಿದೆ. ಈಗ ಸೇರ್ಪಡೆಯಾಗಿರುವವರಲ್ಲಿ ಬಹುತೇಕರು 10 ವರ್ಷಗಳಿಂದ ಬಿಬಿಎಂಪಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ಸೇರ್ಪಡೆ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳದ ಕಾರಣ ಕೆಲವು ಸವಲತ್ತುಗಳನ್ನು ಪಡೆಯಲು ಸಮಸ್ಯೆ ಎದುರಾಗುತ್ತಿತ್ತು. ಸೇರ್ಪಡೆಗೊಂಡವರಲ್ಲಿ ಸಿ ವೃಂದದ 7 ಸಿಬ್ಬಂದಿಯ ಹಾಗೂ ಡಿ ವೃಂದದ 27 ಸಿಬ್ಬಂದಿಯ ಹೆಸರು ಮತ್ತು ವಿಳಾಸಗಳನ್ನು ಇನ್ನೊಮ್ಮೆ ತಾಳೆ ಮಾಡುವಂತೆ ಸೂಚಿಸಲಾಗಿದೆ. ಸಿ ವೃಂದದ ಪಟ್ಟಿಯಲ್ಲಿ ಎಸಿಬಿ ವಿಚಾ ರಣೆ ಬಳಿಕ ವಜಾಗೊಂಡ, ಅನಧಿಕೃತ ಗೈರುಹಾಜರಾದ ಅಥವಾ ಮರಣಹೊಂದಿದ ನಾಲ್ವರು ಸಿಬ್ಬಂದಿ ಇದ್ದಾರೆ. ಡಿ ವೃಂದದ ಪಟ್ಟಿಯಲ್ಲಿ ಅನಧಿಕೃತ ಗೈರು, ಸೇವಾ ನಿವೃತ್ತಿ ಅಥವಾ ಮರಣ ಹೊಂದಿದ 23 ಮಂದಿಯೂ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.