ADVERTISEMENT

ಗಾಳಿ ಬೆಳಕಿಲ್ಲ, ಶೌಚಾಲಯ ಸ್ಥಿತಿ ಶೋಚನೀಯ

ಉಸಿರುಗಟ್ಟಿಸುವ ವಾತಾವರಣದಲ್ಲಿ ಬದುಕುತ್ತಿದ್ದಾರೆ ಕಟ್ಟಡ ಕಾರ್ಮಿಕರು

ಎನ್.ನವೀನ್ ಕುಮಾರ್
Published 1 ಜನವರಿ 2018, 19:57 IST
Last Updated 1 ಜನವರಿ 2018, 19:57 IST
ಕಾಲೊನಿ–1ರಲ್ಲಿ ಸ್ನಾನ ಹಾಗೂ ಬಟ್ಟೆ ಒಗೆಯುವುದರಲ್ಲಿ ನಿರತರಾಗಿದ್ದ ಕಾರ್ಮಿಕರು
ಕಾಲೊನಿ–1ರಲ್ಲಿ ಸ್ನಾನ ಹಾಗೂ ಬಟ್ಟೆ ಒಗೆಯುವುದರಲ್ಲಿ ನಿರತರಾಗಿದ್ದ ಕಾರ್ಮಿಕರು   

ಬೆಂಗಳೂರು: ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದ ಕಿರಿದಾದ ಕೊಠಡಿಗಳು, ಉಸಿರುಗಟ್ಟಿಸುವಂತಿರುವ ಈ ಕೊಠಡಿಗಳಲ್ಲೇ 6ಕ್ಕೂ ಹೆಚ್ಚು ಮಂದಿ ವಾಸ. 1,500 ಜನರಿಗೆ ಇರುವುದು 40 ಶೌಚಾಲಯಗಳು. ಬಯಲಲ್ಲೇ ಸ್ನಾನ...

ವರ್ತೂರು ಸಮೀಪದ ಬಳಗೆರೆಯಲ್ಲಿ ಶೋಭಾ ಡ್ರೀಮ್‌ ಎಕರ್ಸ್‌ ವಸತಿ ಸಮುಚ್ಚಯದ ಕಟ್ಟಡ ಕಾರ್ಮಿಕರು ಬಿಡಾರ ಹೂಡಿರುವ ಕಾಲೊನಿಗಳಲ್ಲಿ ಕಂಡುಬಂದ ಚಿತ್ರಣವಿದು.‌

ಈ ಕಾರ್ಮಿಕರಿಗಾಗಿ ಕಾಲೊನಿ–1, ಕಾಲೊನಿ–2 ಹಾಗೂ ಚೈನಾ ಕಾಲೊನಿಗಳನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು ಕಾಲೊನಿ–1 ಹಾಗೂ 2ರಲ್ಲಿ ಹಾಗೂ ತಾಂತ್ರಿಕ ಕೆಲಸ ನಿರ್ವಹಿಸುವ ಕಾರ್ಮಿಕರು ಚೈನಾ ಕಾಲೊನಿಯಲ್ಲಿ ವಾಸವಿದ್ದಾರೆ. ಕಾಲೊನಿ– 2ರಲ್ಲಿ ಕಲುಷಿತ ನೀರು ಸೇವಿಸಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.

ADVERTISEMENT

ಕಾಲೊನಿ–2ರಲ್ಲಿ 1,500 ಕಾರ್ಮಿಕರು ವಾಸವಾಗಿದ್ದಾರೆ. ಕಿಷ್ಕಿಂಧೆಯಂತಿರುವ ಇಲ್ಲಿನ ಶೆಡ್‌ಗಳಲ್ಲೇ ಆರಕ್ಕೂ ಹೆಚ್ಚು ಮಂದಿ ವಾಸ ಮಾಡಬೇಕು. ಅಡುಗೆಯನ್ನೂ ಅಲ್ಲೇ ಮಾಡಿಕೊಳ್ಳಬೇಕು. ಈ ಕೊಠಡಿಗಳಲ್ಲಿ ಕಿಟಕಿಗಳೂ ಇಲ್ಲ, ಫ್ಯಾನ್‌ ಸೌಲಭ್ಯವೂ ಇಲ್ಲ.

ಬಯಲಲ್ಲೇ ಸ್ನಾನ: ತೆರೆದ ಪ್ರದೇಶದಲ್ಲಿ ದೊಡ್ಡ ತೊಟ್ಟಿಗಳನ್ನು ನಿರ್ಮಿಸಿದ್ದು, ಅಲ್ಲೇ ಸ್ನಾನ ಮಾಡಬೇಕಿದೆ. ಟ್ಯಾಂಕರ್‌ ನೀರೇ ಇವರಿಗೆ ಆಧಾರ. ಕುಡಿಯಲು, ಬಟ್ಟೆ ಒಗೆಯಲು, ಸ್ನಾನ ಮಾಡಲು, ಶೌಚಾಲಯಕ್ಕೂ ಇದೇ ನೀರನ್ನು ಬಳಕೆ ಮಾಡಬೇಕು. ನೊಣಗಳ ಹಾವಳಿ ವಿಪರೀತ.

ಕಾಲೊನಿ–1ರಲ್ಲಿ 100 ಶೆಡ್‌ಗಳಿದ್ದು, ಪ್ರತಿ ಶೆಡ್‌ನಲ್ಲಿ ಐದು ಮಂದಿ ವಾಸ ಮಾಡುತ್ತಿದ್ದಾರೆ. ಇಲ್ಲೂ ತೆರೆದ ಪ್ರದೇಶದಲ್ಲೇ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಹತ್ತಾರು ಮಂದಿ ಒಟ್ಟಿಗೆ ಸ್ನಾನ ಮಾಡುತ್ತಿದ್ದ ದೃಶ್ಯ ಇಲ್ಲೂ ಕಂಡುಬಂತು.

ಇಲ್ಲಿ ಶೌಚಾಲಯದ ವ್ಯವಸ್ಥೆ ಇದ್ದರೂ ವ್ಯಕ್ತಿಯೊಬ್ಬರು ಬಯಲು ಪ್ರದೇಶದಲ್ಲೇ ಮೂತ್ರವಿಸರ್ಜನೆ ಮಾಡುತ್ತಿದ್ದರು. ಕಾಲೊನಿಯ ಕೊಳಚೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಇಲ್ಲೂ ನೊಣಗಳ ಹಾವಳಿ ವಿಪರೀತ.

ಒಂದು ಕೊಠಡಿಯಲ್ಲಿ 14 ಮಂದಿ: ಚೈನಾ ಕಾಲೊನಿಯಲ್ಲಿ ಒಂದು ಅಂತಸ್ತಿನ ಕಟ್ಟಡವಿದೆ. ಇವುಗಳನ್ನು ಕಬ್ಬಿಣದ ತೊಲೆ, ಪ್ಲಾಸ್ಟಿಕ್‌ ಬಳಸಿ ನಿರ್ಮಿಸಲಾಗಿದೆ. ಇಲ್ಲಿ 100 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ 14 ಮಂದಿ ವಾಸವಾಗಿದ್ದಾರೆ. ಈ ಕಾಲೊನಿಯು ಎಲೆಕ್ಟ್ರಿಷಿಯನ್‌ಗಳು ಸೇರಿದಂತೆ ತಾಂತ್ರಿಕ ಸಿಬ್ಬಂದಿಗೆ ಮೀಸಲಾಗಿರುವುದರಿಂದ ಕಾರ್ಮಿಕರ ಕಾಲೊನಿಗಿಂತ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಅಡುಗೆ ಮಾಡಿಕೊಳ್ಳಲು ಪ್ರತ್ಯೇಕ ಅಡುಗೆ ಕೋಣೆ ಇದೆ. ಒಮ್ಮೆಲೆ 80ಕ್ಕೂ ಹೆಚ್ಚು ಮಂದಿ ಅಡುಗೆ ಮಾಡಬಹುದು. ಇದರಿಂದ ಬರುವ ಹೊಗೆಯನ್ನು ಹೊರಗೆ ಹಾಕಲು ಫ್ಯಾನ್‌ಗಳ ವ್ಯವಸ್ಥೆ ಮಾಡಿಲ್ಲ. ನೈರ್ಮಲ್ಯವನ್ನೂ ಕಾಪಾಡಿಲ್ಲ. 10ಕ್ಕೂ ಹೆಚ್ಚು ಮಂದಿ ಸ್ನಾನ ಮಾಡುವಂತಹ ಸ್ನಾನಗೃಹವಿದೆ.

ಕಾಲೊನಿ–1, ಚೈನಾ ಕಾಲೊನಿಗೆಂದೇ ಕುಡಿಯುವ ನೀರು ಶುದ್ಧೀಕರಣ ಘಟಕ ಇದೆ. ಆದರೆ, ಅದು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಅದನ್ನು ಒಮ್ಮೆಯೂ ಬಳಸಿರಲಿಲ್ಲ. ಕಾರ್ಮಿಕರು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡಿರುವ ಸಮುಚ್ಚಯದ ಆಡಳಿತ ಮಂಡಳಿಯವರು, ಈ ಘಟಕವನ್ನು ದುರಸ್ತಿಪಡಿಸಿದ್ದಾರೆ.

‘ಮಲ ತಡೆದುಕೊಳ್ಳಲು ಆಗುತ್ತದೆಯೇ?’: ಇಲ್ಲಿ ನೆಲೆಸಿರುವ ಜನರಿಗೆ ಕೇವಲ 40 ಶೌಚಾಲಯಗಳಿವೆ. ಶೌಚಕ್ಕೆ ಹೋಗಬೇಕಾದರೆ ಸರದಿ ಸಾಲಿನಲ್ಲಿ ನಿಲ್ಲಬೇಕು. ಮಲವನ್ನು ಹೊಟ್ಟೆಯಲ್ಲೇ ಎಷ್ಟು ಹೊತ್ತು ಹಿಡಿದಿಟ್ಟುಕೊಳ್ಳಲು ಸಾಧ್ಯ. ನೋವು ತಡೆಯಲಾರದೆ ಬಯಲಿಗೆ ಹೋಗಿ ಶೌಚ ಮಾಡಬೇಕಾದ ಪರಿಸ್ಥಿತಿ ಇದೆ. ಸಾಂಕ್ರಾಮಿಕ ರೋಗದ ಭೀತಿಯಿಂದ ಬಹುತೇಕ ಕಾರ್ಮಿಕರು ಊರುಗಳಿಗೆ ಮರಳಿದ್ದಾರೆ ಎಂದು ಕಾಲೊನಿ–2ರ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

‘ಕುಡಿಯಲು ಟ್ಯಾಂಕರ್‌ ನೀರು ತರಿಸುತ್ತಾರೆ. ಅದನ್ನೇ ಎಲ್ಲದಕ್ಕೂ ಬಳಸಬೇಕು. ಕೊಠಡಿಗಳು ಕಿರಿದಾಗಿದ್ದು, ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ’ ಎಂದು ಅವರು ಆರೋಪಿಸಿದರು.

ಕಾರ್ಮಿಕರ ಸಾವು ಸಂಭವಿಸಿದ ಬಳಿಕ ಕಾಲೊನಿಯನ್ನು ಸ್ವಚ್ಛವಾಗಿ ಇಡಲಾಗಿದೆ.

‘ಈ ಮೊದಲು ಶೌಚಾಲಯ ಹಾಗೂ ಅಡುಗೆ ಕೋಣೆಯ ಸ್ಥಿತಿ ತೀರಾ ಕೆಟ್ಟದಾಗಿತ್ತು. ಈಗ ಸ್ವಚ್ಛಗೊಳಿಸಿದ್ದಾರೆ’ ಎಂದು ಮತ್ತೊಬ್ಬ ಕಾರ್ಮಿಕ ತಿಳಿಸಿದರು.

‘ಮೂರು ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಕುಡಿಯಲು ಕೊಳವೆ ಬಾವಿಯ ನೀರನ್ನು ಪೂರೈಸಲಾಗುತ್ತಿದೆ. ಈ ನೀರಿನಲ್ಲಿ ಮಣ್ಣಿನಂಶವಿದೆ. ಇಲ್ಲಿ ನೊಣಗಳ ಹಾವಳಿ ಹೆಚ್ಚಾಗಿದೆ. ಆದರೆ, ಕಾಲೊನಿ–2ಕ್ಕೆ ಹೋಲಿಸಿದರೆ ನಮ್ಮ ಕಾಲೊನಿ ಸ್ವಲ್ಪ ಚೆನ್ನಾಗಿದೆ’ ಎಂದು  ಕಾಲೊನಿ–1ರ ನಿವಾಸಿ ಲಕ್ಷ್ಮಿ ತಿಳಿಸಿದರು.

ಶೋಭಾ ಡ್ರೀಮ್‌ ಎಕರ್ಸ್‌ನ ಮುಖ್ಯಸ್ಥರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

‘ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’

ಶೋಭಾ ಡ್ರೀಮ್‌ ಎಕರ್ಸ್‌ನ ಉಪಾಧ್ಯಕ್ಷ (ಆಡಳಿತ) ರವಿ ನಾಯರ್‌, ಸಹ ಉಪಾಧ್ಯಕ್ಷ ಜಗನ್ಮೋಹನ್‌ ಹಾಗೂ ಕಾಲೊನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಪವನ್‌ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದರು.

ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಸೋಮವಾರ ಇಲ್ಲಿನ ಕಾಲೊನಿಗಳಿಗೆ ಭೇಟಿ ನೀಡಿದರು. ಇಲ್ಲಿನ ವಾಸದ ಕೊಠಡಿಗಳು, ಶೌಚಾಲಯ, ಸ್ನಾನದ ಗೃಹ ಮತ್ತು ಅಡುಗೆ ಕೊಠಡಿಯನ್ನು ಪರಿಶೀಲಿಸಿದರು.

‘ಮೂವರು ಅಸುನೀಗಿದ ಬಳಿಕವೂ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿಲ್ಲ. ಶೌಚಾಲಯ, ಸ್ನಾನದ ತೊಟ್ಟಿಗಳು, ಅಡುಗೆ ಕೋಣೆಯನ್ನು ಪಾಲಿಕೆಯ ವತಿಯಿಂದ ಸ್ವಚ್ಛಗೊಳಿಸಲಾಗುತ್ತಿದೆ. ವರ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮೂರು ದಿನಗಳಿಂದ ಇಲ್ಲಿಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಆದರೆ, ಶೋಭಾ ಡ್ರೀಮ್‌ ಸಂಸ್ಥೆಯವರು ವೈದ್ಯರನ್ನು ನಿಯೋಜಿಸಿಲ್ಲ. ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿಲ್ಲ’ ಎಂದು ಮಹದೇವಪುರ ವಲಯದ ಆರೋಗ್ಯ ವೈದ್ಯಾಧಿಕಾರಿ ಡಾ. ಪಿ.ಕಲ್ಪನಾ ಗಮನಕ್ಕೆ ತಂದರು.

ಸರ್ಫರಾಜ್‌ ಖಾನ್‌ ಅವರು ಪವನ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ವಸತಿ ಸಮುಚ್ಚಯದ ಬಳಿ ನಿರ್ಮಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕದ ನೀರು ವಾಸನೆ ಬರುತ್ತಿತ್ತು. ಅದರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಜಂಟಿ ಆಯುಕ್ತ ಸೂಚನೆ ನೀಡಿದರು.

ಕಾರ್ಮಿಕರ ಆರೋಗ್ಯದಲ್ಲಿ ಚೇತರಿಕೆ

‘ಡಿಸೆಂಬರ್‌ 30ರಂದು 48 ಜನರಲ್ಲಿ ವಾಂತಿ, ಭೇದಿ ಇರುವುದು ಕಂಡುಬಂದಿತ್ತು. 31ರಂದು 7 ಮಂದಿ ಕಾಲರಾ ಲಕ್ಷಣಗಳನ್ನು ಹೊಂದಿದ್ದುದು ಕಂಡುಬಂತು. ಈ ಪೈಕಿ ಲಾಲ್ಟೂ ಕಂಬಕ್‌ (19) ಎಂಬುವರನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಕಾಲೊನಿಯಲ್ಲೇ ಚಿಕಿತ್ಸೆಯನ್ನು ಮುಂದುವರಿಸಿದ್ದೇವೆ. ಅವರು ಈಗ ಚೇತರಿಸಿಕೊಂಡಿದ್ದಾರೆ’ ಎಂದು ವರ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಅಸ್ವಸ್ಥರಾಗಿದ್ದ ಕಣ್ಣಯ್ಯ (22) ಎಂಬುವರು ಸೇಂಟ್‌ ಫಿಲೋಮಿನಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರ
ವಾಗಿದೆ. ಅಕ್ಕೂರ್‌ (21) ಎಂಬುವರು ಸೇಂಟ್‌ ಜಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ವರದಿ ಬಳಿಕವಷ್ಟೇ ಕಾಲರಾ ಖಚಿತಪಡಿಸಬಹುದು: ಡಾ. ಕೃಷ್ಣಪ್ಪ

ಕಲುಷಿತ ನೀರಿನ ಮಾದರಿ, ಮಲ ಇನ್ನಿತರೆ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ನಿಖರ ಕಾರಣ ತಿಳಿಯ
ಲಿದೆ. ಕಲುಷಿತ ನೀರಿನಿಂದಾಗಿ ಭೇದಿ, ವಾಂತಿ ಆಗುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ಸುಸ್ತು ಬರುತ್ತದೆ. ಈ ವೇಳೆ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಿರುತ್ತದೆ ಎಂದು ಡಾ. ಕೃಷ್ಣಪ್ಪ ತಿಳಿಸಿದರು.

‘ಈ ಭಾಗದಲ್ಲಿ ಕಾಲರಾ ಪ್ರಕರಣಗಳು ಕಂಡುಬಂದ ನಿದರ್ಶನಗಳಿಲ್ಲ. ಬಿಹಾರ, ಒಡಿಶಾ, ಅಸ್ಸಾಂ ಕಡೆಗಳಿಂದ ಕಾರ್ಮಿಕರು ಇಲ್ಲಿಗೆ ವಲಸೆ ಬರುತ್ತಾರೆ. ಇವರ ಪೈಕಿ ಯಾರಿಗಾದರೂ ಕಾಲರಾ ಸೋಂಕು ಇದ್ದಿರಬಹುದು. ಅವರ ಮಲ, ಮೂತ್ರವು ನೀರಿಗೆ ಸೇರಿ ಕಾಲರಾ ಉಂಟಾಗಿರುವ ಶಂಕೆ ಇದೆ. ಸದ್ಯ, ಯಾರಲ್ಲೂ ಕಾಲರಾ ಲಕ್ಷಣಗಳು ಕಂಡುಬಂದಿಲ್ಲ. ಇನ್ನೂ ಮೂರು ದಿನಗಳವರೆಗೆ ನಿಗಾ ವಹಿಸುತ್ತೇವೆ’ ಎಂದು ಹೇಳಿದರು.

‘ಸಂಸ್ಥೆಯ ಅಸಹಕಾರ’

‘ಶೋಭಾ ಡ್ರೀಮ್‌ ಎಕರ್ಸ್‌ನವರು ಕಾರ್ಮಿಕರಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ವಾಂತಿ, ಭೇದಿಯಿಂದ ಕಾರ್ಮಿಕರು ಸಾಯುತ್ತಿರುವ ಮಾಹಿತಿ ತಿಳಿದು, ಇಲ್ಲಿಗೆ ಬಂದೆವು. ಆದರೆ, ಸಂಸ್ಥೆಯ ಅಧಿಕಾರಿಗಳು ಒಳಗೆ ಬಿಟ್ಟಿರಲಿಲ್ಲ. ಅಲ್ಲದೆ, ಕಾರ್ಮಿಕರು ಮೃತಪಟ್ಟಿರುವ ಕುರಿತು ದೂರು ದಾಖಲಿಸಿಕೊಳ್ಳಲು ವರ್ತೂರು ಠಾಣೆ ಪೊಲೀಸರು ಮೀನಮೇಷ ಎಣಿಸಿದ್ದರು’ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಪುಷ್ಪಾ ಮಂಜುನಾಥ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.