ADVERTISEMENT

ಕೆ.ಆರ್‌.ಪುರ: ಕೆರೆಗಳಿಗೆ ಬೇಕಿದೆ ಕಾಯಕಲ್ಪ

ಹೂಳು, ತ್ಯಾಜ್ಯದ ಸಮಸ್ಯೆಯಿಂದ ನಲುಗಿವೆ ಜಲಮೂಲಗಳು

ಹಿತೇಶ ವೈ.
Published 4 ಜನವರಿ 2018, 20:29 IST
Last Updated 4 ಜನವರಿ 2018, 20:29 IST
ಬೆನ್ನಿಗಾನಹಳ್ಳಿ ಕೆರೆಯಲ್ಲಿ ಕಳೆ ಸಸ್ಯ ತುಂಬಿಕೊಂಡಿದೆ.
ಬೆನ್ನಿಗಾನಹಳ್ಳಿ ಕೆರೆಯಲ್ಲಿ ಕಳೆ ಸಸ್ಯ ತುಂಬಿಕೊಂಡಿದೆ.   

ಬೆಂಗಳೂರು: ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಗಂಗಶೆಟ್ಟಿ ಕೆರೆ, ಆವಲಹಳ್ಳಿ ಕೆರೆ ಮತ್ತು ಬೆನ್ನಿಗಾನಹಳ್ಳಿ ಕೆರೆಗಳು ಹೂಳು ಹಾಗೂ ತ್ಯಾಜ್ಯದ ಸಮಸ್ಯೆಯಿಂದ ದಿನೇದಿನೇ ಸೊರಗುತ್ತಿವೆ.

ಇವುಗಳ ಸುತ್ತಮುತ್ತಲೂ ಸುರಿಯುತ್ತಿರುವ ತ್ಯಾಜ್ಯ ಹಾಗೂ ಕಟ್ಟಡದ ಅವಶೇಷ ಇವುಗಳ ಆಪೋಶನ ತೆಗೆದುಕೊಳ್ಳುತ್ತಿದೆ. ಇವುಗಳನ್ನು ಸೇರಿಕೊಳ್ಳುತ್ತಿರುವ ಕಲುಷಿತ ನೀರಿನಿಂದಾಗಿ ಕಳೆ ಸಸ್ಯಗಳು ಹುಲುಸಾಗಿ ಬೆಳೆದಿವೆ.

ಗಂಗಶೆಟ್ಟಿ ಕೆರೆಯು ತಾಲ್ಲೂಕು ಕಚೇರಿಯ ಮುಂದೆಯೇ ಇದೆ. ‘ಕೆರೆಯನ್ನು ಒತ್ತುವರಿ ಮಾಡುವುದು, ತ್ಯಾಜ್ಯವಸ್ತುಗಳನ್ನು ಹಾಕುವುದು, ನೀರನ್ನು ಮಲಿನಗೊಳಿಸುವುದು ಹಾಗೂ ವನ್ಯಜೀವಿ ಬೇಟೆ, ಅರಣ್ಯ ಕಾನೂನಿನನ್ವಯ ಶಿಕ್ಷಾರ್ಹ ಅಪರಾಧ’ ಎಂದು ಅರಣ್ಯ ಇಲಾಖೆ ಅದರ ಪಕ್ಕದಲ್ಲಿ ಸೂಚನಾ ಫಲಕವನ್ನೂ ಅಳವಡಿಸಿದೆ. ಆದರೆ, ಮನೆ ಮನೆಗಳಿಂದ ಸಂಗ್ರಹಿಸುವ ತ್ಯಾಜ್ಯವನ್ನು ಬೇರ್ಪಡಿಸಲು ಈ ಜಲಮೂಲದ ಪಕ್ಕದ ಸ್ಥಳವನ್ನೇ ಬಳಸಿಕೊಳ್ಳಲಾಗುತ್ತಿದೆ. ಇಲ್ಲಿಂದಲೂ ತ್ಯಾಜ್ಯ ಕೆರೆಯನ್ನು ಸೇರುತ್ತಿದೆ.

ADVERTISEMENT

ಈ ಕೆರೆಯ ದುಸ್ಥಿತಿ ಬಗ್ಗೆ ನಗರ ಜಿಲ್ಲೆಯ ಉಪ ಅರಣ್ಯಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ಅವರನ್ನು ವಿಚಾರಿಸಿದಾಗ, ‘ಈ ಕೆರೆಯು 2010ರವರೆಗೂ ಅರಣ್ಯ ಇಲಾಖೆ ಅಧೀನದಲ್ಲಿತ್ತು. ಈಗ ಇವುಗಳ ಅಭಿವೃದ್ಧಿಯ ಹೊಣೆಯನ್ನು ಬೇರೆ ಇಲಾಖೆಗೆ ವಹಿಸಲಾಗಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಈ ಕೆರೆಯ ಮೀನು ಹಿಡಿದಿದ್ದರು. ಆ ಸಂದರ್ಭದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಸ್ವಲ್ಪ ದಿನ ಕೆರೆಯ ಸುತ್ತಲೂ ಹೂಳನ್ನು ತೆಗೆದಿದ್ದರು. ಅದನ್ನು ಬೇರೆ ಸ್ಥಳಕ್ಕೆ ರವಾನಿಸಿಲ್ಲ. ಹಾಗಾಗಿ ಈ ಹೂಳು ಮತ್ತೆ ಕೆರೆಗೆ ಸೇರಿಕೊಳ್ಳುತ್ತಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಲೋಕೇಶ್‌.

ಈ ಕೆರೆ ಸಮೀಪದ ನಿವಾಸಿಗಳು ಹಾವು ಹಾಗೂ ಸೊಳ್ಳೆ ಕಾಟ ಅನುಭವಿಸುತ್ತಿದ್ದಾರೆ. ‘ಸಂಜೆ ವೇಳೆ ಇಲ್ಲಿ ಸೊಳ್ಳೆಗಳ ಕಾಟ ವಿಪರೀತ’ ಎನ್ನುತ್ತಾರೆ ಇಲ್ಲಿನ ನಿವಾಸಿ ಸುಬ್ಬಮ್ಮ.

ಜಲಮೂಲದ ಸುತ್ತಲೂ ರಸ್ತೆ ನಿರ್ಮಿಸಿ ಅಕ್ಕಪಕ್ಕದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಒತ್ತುವರಿಯನ್ನೂ ತಡೆಯಬಹುದು. ಆದರೆ, ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಆವಲಹಳ್ಳಿ ಕೆರೆಗೆ ಮಾಂಸದ ತ್ಯಾಜ್ಯ: ಆವಲಹಳ್ಳಿ ಕೆರೆಯೂ ಹೂಳಿನಿಂದ ತುಂಬಿಕೊಂಡಿದೆ. ಇದರ ಸುತ್ತಲೂ ಕಟ್ಟಡದ ಅವಶೇಷಗಳನ್ನು ಸುರಿಯಲಾಗುತ್ತಿದೆ. ಇದರಿಂದಾಗಿ ಜಲಮೂಲ  ಮಾಯವಾಗುತ್ತಿದೆ. ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಇಲ್ಲಿ ತಂದು ಸುರಿಯುತ್ತಿರುವುದು ಇಲ್ಲಿ ಬೀದಿ ನಾಯಿಗಳ ಹಾವಳಿಗೆ ಕಾರಣವಾಗಿದೆ. ಆಸುಪಾಸಿನ ಕಾರ್ಖಾನೆಗಳು ಮತ್ತು ಮನೆಗಳ ಕೊಳಚೆ ನೀರು ಜಲಮೂಲವನ್ನು ಸೇರುತ್ತಿದೆ.

ಬೆನ್ನಿಗಾನಹಳ್ಳಿ ಕೆರೆಯಲ್ಲೂ ಹೂಳಿನ ಸಮಸ್ಯೆ ಮಿತಿಮೀರಿದೆ. ಈ ಜಲಮೂಲದ ತುಂಬಾ ಕಳೆ ಸಸ್ಯ ತುಂಬಿಕೊಂಡಿದೆ. ಇಲ್ಲಿನ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಕೆರೆಯ ಅಭಿವೃದ್ಧಿ ಇನ್ನೂ ಮರಿಚೀಕೆಯಾಗಿಯೇ ಉಳಿದಿದೆ.

‘ನಮ್ಮ ವ್ಯಾಪ್ತಿಗೆ ಬರುವುದಿಲ್ಲ!’
ನಗರದ ಕೆರೆಗಳ ಉಸ್ತುವಾರಿಯನ್ನು 2010ರ ನಂತರ ಅರಣ್ಯ ಇಲಾಖೆಯಿಂದ ಬಿಡಿಎ, ಬಿಬಿಎಂಪಿ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಗಳಿಗೆ ವಹಿಸಲಾಗಿದೆ. ಆ ಬಳಿಕ ಕೆಲವು ಕೆರೆಗಳು ಯಾರ ಅಧೀನಕ್ಕೆ ಬರುತ್ತವೆ ಎನ್ನುವ ಬಗ್ಗೆ ಅಧಿಕಾರಿಗಳಲ್ಲೇ ಗೊಂದಲ ಇದೆ. ಕೆ.ಆರ್‌.ಪುರ ಕ್ಷೇತ್ರದ ಈ ಜಲಮೂಲಗಳ ಅಭಿವೃದ್ಧಿ ಬಗ್ಗೆ ವಿಚಾರಿಸಿದರೆ, ‘ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುವ ಸಿದ್ಧ ಉತ್ತರ ಲಭ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.