ADVERTISEMENT

ಹಕ್ಕಿಜ್ವರ: 14 ಸಾವಿರ ಜನರ ತಪಾಸಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:38 IST
Last Updated 6 ಜನವರಿ 2018, 19:38 IST

ಬೆಂಗಳೂರು: ಉತ್ತರ ತಾಲ್ಲೂಕಿನ ಥಣಿಸಂದ್ರ ಸಮೀಪದ ದಾಸರಹಳ್ಳಿಯಲ್ಲಿ ಹಕ್ಕಿಜ್ವರ (ಎಚ್‌5ಎನ್‌1) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ 14 ಸಾವಿರ ಜನರನ್ನು ತಪಾಸಣೆ ನಡೆಸಲಾಯಿತು.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ 102 ಆರೋಗ್ಯ ಸಹಾಯಕರು ದಾಸರಹಳ್ಳಿ ಹಾಗೂ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ, ಅವರ ಆರೋಗ್ಯ ತಪಾಸಣೆ ನಡೆಸಿದರು. ಯಾರಲ್ಲೂ ಎಚ್‌5ಎನ್‌1 ರೋಗಾಣು ಕಂಡುಬಂದಿಲ್ಲ. ಇದೇ 12ರವರೆಗೂ ತಪಾಸಣಾ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸುನಂದಾ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಚ್‌5ಎನ್‌1 ಸೋಂಕಿತ ಕೋಳಿಗಳನ್ನು ಸರಬರಾಜು ಮಾಡಿದ್ದ ಕೋಳಿ ಫಾರಂನಲ್ಲಿದ್ದ 12 ಕೋಳಿಗಳ ಮಾದರಿಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಕೋಳಿಗಳಲ್ಲಿ ಎಚ್‌5ಎನ್‌1 ರೋಗಾಣು ಇಲ್ಲದಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಹಕ್ಕಿಜ್ವರ ಹತೋಟಿಯಲ್ಲಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ADVERTISEMENT

ಕೇಂದ್ರ ತಂಡದಿಂದ ಪರಿಶೀಲನೆ: ದಾಸರಹಳ್ಳಿಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿಯೋಜಿಸಿರುವ ತಜ್ಞರ ತಂಡವು ಪರಿಶೀಲಿಸಿತು. ಅಲ್ಲದೆ, ಮನೆಗಳ ಸದಸ್ಯರನ್ನು ಭೇಟಿ ಮಾಡಿತು. ಅಗ್ರಹಾರ ಬಡಾ
ವಣೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾಡುಗೊಂಡನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಕೀಯ ಅಧಿಕಾರಿಯಿಂದ ಮಾಹಿತಿ ಪಡೆಯಿತು.

ಶಂಕಿತ ಹಕ್ಕಿಜ್ವರದಿಂದ ಬಳಲುವವರಿಗಾಗಿ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 10 ಹಾಸಿಗೆಗಳು ಹಾಗೂ ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ 14 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ತಜ್ಞರ ತಂಡ ಈ ಆಸ್ಪತ್ರೆಗಳಿಗೆ ಭೇಟಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.