ADVERTISEMENT

ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಭಾವಚಿತ್ರ ತೆರವುಗೊಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಭಾವಚಿತ್ರ ತೆರವುಗೊಳಿಸಲು ಮನವಿ
ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಭಾವಚಿತ್ರ ತೆರವುಗೊಳಿಸಲು ಮನವಿ   

ಬೆಂಗಳೂರು: ‘ಭ್ರಷ್ಟಾಚಾರ ಆರೋಪದಲ್ಲಿ ಕ್ರಿಮಿನಲ್ ಆರೋಪಿಯಾಗಿರುವ ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರ ಭಾವಚಿತ್ರವನ್ನು ಹೈಕೋರ್ಟ್‌ನ ಕೋರ್ಟ್ ಹಾಲ್‌ ಸಂಖ್ಯೆ 1ರಿಂದ ತೆರವುಗೊಳಿಸಬೇಕು’ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಮನವಿ ಸಲ್ಲಿಸಲಾಗಿದೆ.

ಈ ಕುರಿತಂತೆ ರಿಜಿಸ್ಟ್ರಾರ್ ಜನರಲ್‌ ಅಶೋಕ ಜಿ.ನಿಜಗಣ್ಣವರ ಅವರಿಗೆ ಹೈಕೋರ್ಟ್‌ ವಕೀಲ ಎನ್‌.ಪಿ.ಅಮೃತೇಶ್‌ ಸೋಮವಾರ ಲಿಖಿತ ಮನವಿ ಸಲ್ಲಿಸಿದ್ದಾರೆ.

‘ಲೋಕಾಯುಕ್ತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಲೋಕಾಯುಕ್ತರೂ ಆಗಿದ್ದ ವೈ.ಭಾಸ್ಕರ ರಾವ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್ಐಟಿ) ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅವರೊಬ್ಬ ಕ್ರಿಮಿನಲ್‌ ಆರೋಪಿ. ಇಂತಹ ವ್ಯಕ್ತಿಯ ಭಾವಚಿತ್ರವನ್ನು ಕೋರ್ಟ್ ಹಾಲ್‌ ಸಂಖ್ಯೆ 1ರಲ್ಲಿ ಇನ್ನೂ ತೂಗುಹಾಕಿರುವುದು ಹೈಕೋರ್ಟ್‌ ಘನತೆಗೆ ತಕ್ಕುದಲ್ಲ’ ಎಂದು ಅಮೃತೇಶ್‌ ಮನವಿಯಲ್ಲಿ ವಿವರಿಸಿದ್ದಾರೆ.

ADVERTISEMENT

ಈ ಕುರಿತಂತೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಅಶೋಕ ಜಿ.ನಿಜಗಣ್ಣವರ, ‘ಮಂಗಳವಾರ (ಜ.9) ಈ ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರ ಗಮನಕ್ಕೆ ತರಲಾಗುವುದು. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕೋರ್ಟ್‌ ಹಾಲ್‌ ಸಂಖ್ಯೆ 1ರಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರಗಳನ್ನು ಎಡ, ಬಲ ಹಾಗೂ ಪೂರ್ವಾಭಿಮುಖವಾಗಿ ತೂಗು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.