ADVERTISEMENT

‘ದುಂದುವೆಚ್ಚದ ದಾಖಲೆಗಳಿದ್ದರೆ ಸಲ್ಲಿಸಿ’

ಸಾಧನಾ ಸಮಾವೇಶ ತಡೆ ಪ್ರಶ್ನಿಸಿದ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ಬೆಂಗಳೂರು: ಆಡಳಿತಾರೂಢ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಧನಾ ಸಮಾವೇಶಕ್ಕೆ ದುಂದುವೆಚ್ಚ ಮಾಡಲಗುತ್ತಿದೆ ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಎಂದು ಹೈಕೋರ್ಟ್‌ ಈ ಕುರಿತ ಅರ್ಜಿದಾರರಿಗೆ ಸೂಚಿಸಿದೆ.

ಹನುಮಂತ ನಗರದ ಕೀರ್ತಿವರ್ಧನ ಜೋಷಿ ಎಂಬ ಕಾನೂನು ಪದವಿ ವಿದ್ಯಾರ್ಥಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ಸೋಮವಾರ ನಡೆಸಿತು.

‘ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕೆ ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಅಧಿಕಾರವಿದೆ. ಅದಕ್ಕಾಗಿ ಜಾಹೀರಾತು ನೀಡುವುದು ತಪ್ಪೇನಲ್ಲ’ ಎಂದು ನ್ಯಾಯಪೀಠ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

‘ಮುಖ್ಯಮಂತ್ರಿ ದುಂದು ವೆಚ್ಚ ಮಾಡುತ್ತಿದ್ದಾರೆ ಎಂಬ ಬಗ್ಗೆ ನಿಮ್ಮ ಬಳಿ ಏನಾದರೂ ದಾಖಲೆಗಳಿದ್ದರೆ ಅವುಗಳನ್ನು ನ್ಯಾಯಾಲಯಕ್ಕೆ ನೀಡಿ. ಆಗ ನ್ಯಾಯಾಲಯ ಮಧ್ಯಪ್ರವೇಶ ಮಾಡಬಹುದು. ಇಲ್ಲವಾದರೆ ಸಮಾವೇಶವನ್ನು ತಡೆಯಲಾಗದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಸಿದ್ದರಾಮಯ್ಯ ಬೊಕ್ಕಸದ ಹಣವನ್ನು ತಮ್ಮ ಸ್ವಾರ್ಥ ಮತ್ತು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಅಕ್ರಮ ಮತ್ತು ಕಾನೂನುಬಾಹಿರ. ಆದ್ದರಿಂದ ಈ ಪ್ರಕರಣ ಇತ್ಯರ್ಥವಾಗುವವರೆಗೂ ಸಾಧನಾ ಸಮಾವೇಶಕ್ಕೆ ಹಣ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.