ADVERTISEMENT

ಪತ್ನಿ ಕೊಂದಿದ್ದ ಪೇಂಟರ್ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ಬೆಂಗಳೂರು: ದೊಡ್ಡಬಾಣಸವಾಡಿಯ ಎ.ಕೆ.ಕಾಲೊನಿಯಲ್ಲಿ ಡಿ.31ರಂದು ಪತ್ನಿಯನ್ನು ಕೊಲೆ ಮಾಡಿ, ತಾನೂ ಚಾಕುವಿನಿಂದ ಕುತ್ತಿಗೆ ಕುಯ್ದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪೇಂಟರ್ ಶಂಕರ್ (45) ಸೋಮವಾರ ನಸುಕಿನ ವೇಳೆ ಮೃತಪಟ್ಟಿದ್ದಾನೆ.

ನಿತ್ಯ ಪಾನಮತ್ತನಾಗಿ ಮನೆಗೆ ಹೋಗುತ್ತಿದ್ದ ಶಂಕರ್, ಶೀಲ ಶಂಕಿಸಿ ಪತ್ನಿ ಲಕ್ಷ್ಮಿ ಜತೆ ಜಗಳ ಮಾಡುತ್ತಿದ್ದ. ಇದೇ ವಿಚಾರವಾಗಿ ಡಿ.31ರ ಬೆಳಿಗ್ಗೆ ಪರಸ್ಪರರ ನಡುವೆ ಗಲಾಟೆಯಾಗಿತ್ತು. ಆಗ ಆರೋಪಿ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪ‍ತ್ನಿಯ ಕುತ್ತಿಗೆ ಸೀಳಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಸಾಯುತ್ತಿದ್ದಂತೆಯೇ ಗಾಬರಿಗೆ ಬಿದ್ದ ಆತ, ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ತಾನೂ ಕುತ್ತಿಗೆ ಕುಯ್ದುಕೊಂಡಿದ್ದ. ಅದೇ ಕಾಲೊನಿಯಲ್ಲಿ ನೆಲೆಸಿರುವ ಲಕ್ಷ್ಮಿ ತಾಯಿ ಲಕ್ಷ್ಮಮ್ಮ, ಮಧ್ಯಾಹ್ನ 12.30ರ ಸುಮಾರಿಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಶಂಕರ್‌ನನ್ನು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

ADVERTISEMENT

ಚಿಕಿತ್ಸೆಗೆ ಸ್ಪಂದಿಸದ ಶಂಕರ್, ಸೋಮವಾರ ನಸುಕಿನ ವೇಳೆ 3 ಗಂಟೆಗೆ ಕೊನೆಯುಸೆರೆಳೆದ.  ‘ನನ್ನ ಹಾಗೂ ಪತ್ನಿ ನಡುವೆ ಅನ್ಯೋನ್ಯತೆ ಇರಲಿಲ್ಲ. ಆಕೆಯ ನಡತೆ ಮೇಲೆ ಅನುಮಾನವಿತ್ತು. ಹೀಗಾಗಿ, ಕೊಲೆ ಮಾಡಿದೆ’ ಎಂದು ಆತ ಸಾಯುವ ಮುನ್ನ ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.