ADVERTISEMENT

ಕಾರ್ಮಿಕರ ಸುರಕ್ಷತೆ, ಅಧಿಕಾರಿಗಳೇ ಹೊಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2018, 19:52 IST
Last Updated 10 ಜನವರಿ 2018, 19:52 IST

ಬೆಂಗಳೂರು: ಕಾರ್ಯನಿರ್ವಹಿಸುವ ವೇಳೆ ಸಫಾಯಿ ಕರ್ಮಚಾರಿಗಳು ಮೃತಪಟ್ಟರೆ, ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಹೇಳಿದರು.

‌ಸೋಮಸುಂದರಪಾಳ್ಯದ ಎನ್‌.ಡಿ.ಸೆಪಲ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕೊಳಚೆ ನೀರು ಶುದ್ಧೀಕರಣ ಘಟಕದ (ಎಸ್‌ಟಿಪಿ) ದುರಸ್ತಿ ವೇಳೆ ಮೂವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಸಭೆ ನಡೆಸಿದರು.

ಸೆಪ್ಟಿಕ್ ಟ್ಯಾಂಕ್, ಎಸ್‌ಟಿಪಿಗಳ ಬಳಿ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ಅವುಗಳ ಆಳ, ಅಗಲದ ಬಗ್ಗೆ ಹಾಗೂ ಅವುಗಳನ್ನು ಸ್ವಚ್ಛಗೊಳಿಸುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಫಲಕಗಳಲ್ಲಿ ಮಾಹಿತಿ ಇರಬೇಕು. ಈ ಸಂಬಂಧ ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಗ್ನಿಶಾಮಕ ದಳದ ಮಾದರಿಯಲ್ಲಿಯೇ ಪ್ರತ್ಯೇಕ ಕಾರ್ಯಪಡೆ ಸ್ಥಾಪಿಸಬೇಕು. ಸಕ್ಕಿಂಗ್ ಯಂತ್ರಗಳು ಹಾಗೂ ಜಟ್ಟಿಂಗ್ ಯಂತ್ರಗಳನ್ನು ಆ ಕಾರ್ಯಪಡೆ ಹೊಂದಿರಬೇಕು. ಅವುಗಳನ್ನು ವಾರ್ಡ್‌ ಕಚೇರಿಯಲ್ಲಿಯೇ ಇರಿಸಬೇಕು. ಅವಶ್ಯಕತೆ ಇದ್ದಾಗ ಸುಲಭವಾಗಿ ಅವು ಕೈಗೆಟುಕುತ್ತವೆ ಎಂದು ತಿಳಿಸಿದರು.

ನಗರ ಜಿಲ್ಲಾಧಿಕಾರಿ ವಿ.ಶಂಕರ್, ಸೋಮಸುಂದರ ಪಾಳ್ಯದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ₹ 10 ಲಕ್ಷ ಪರಿಹಾರ ನೀಡಲಾಗಿದೆ ಎಂದರು.

17 ಮಂದಿ ಸಾವು: ಮ್ಯಾನ್‌ಹೋಲ್‌ಗಳು, ಸೆಪ್ಟಿಕ್ ಟ್ಯಾಂಕ್ ಹಾಗೂ ಎಸ್‌ಟಿಪಿಗಳಿಗೆ ಇಳಿದು ರಾಜ್ಯದಾದ್ಯಂತ 68 ಮಂದಿ ಸತ್ತಿದ್ದಾರೆ. ಈ ಪೈಕಿ 17 ಮಂದಿ ನಗರದಲ್ಲಿ ಅಸುನೀಗಿದ್ದಾರೆ. ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಇದುವರೆಗೆ ಶಿಕ್ಷೆ ಆಗಿಲ್ಲ. ತಂತ್ರಜ್ಞಾನದಲ್ಲಿ ಮುಂದುವರೆದ ಬೆಂಗಳೂರಿನಲ್ಲಿಯೇ ಇಂಥ ಪರಿಸ್ಥಿತಿ ಇದ್ದರೆ, ಬೇರೆ ನಗರಗಳ ಸ್ಥಿತಿ ಏನು ಎಂದು ಅಧಿಕಾರಿಗಳನ್ನು ಜಗದೀಶ್ ಪ್ರಶ್ನಿಸಿದರು.

ಆರೋಪಿಗಳ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ ಎಂದು ಕೇಳಿದ ಪ್ರಶ್ನೆಗೆ, ‘ಆಕಸ್ಮಿಕ ಸಾವು ಅಥವಾ ನಿರ್ಲಕ್ಷ್ಯದಿಂದ ಸಾವು ಎಂಬ ಆರೋಪದಡಿ ಇಂಥ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಇವುಗಳು ಜಾಮೀನು ಪಡೆಯಬಹುದಾದ ಪ್ರಕರಣಗಳಾ
ಗಿವೆ’ ಎಂದು ಆಗ್ನೇಯ ಡಿಸಿಪಿ ಎಂ.ಬಿ.ಬೋರಲಿಂಗಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.