ADVERTISEMENT

ಸಂವಿಧಾನದ ಮೌಲ್ಯಗಳಿಗೆ ಧಕ್ಕೆ: ಚಂಪಾ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:53 IST
Last Updated 11 ಜನವರಿ 2018, 19:53 IST
ಸಂವಿಧಾನದ ಮೌಲ್ಯಗಳಿಗೆ ಧಕ್ಕೆ: ಚಂಪಾ ಆತಂಕ
ಸಂವಿಧಾನದ ಮೌಲ್ಯಗಳಿಗೆ ಧಕ್ಕೆ: ಚಂಪಾ ಆತಂಕ   

ಬೆಂಗಳೂರು: ‘ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗುವಂತಹ ಬೆಳವಣಿಗೆ ನಡೆಯುತ್ತಿರುವುದಕ್ಕೆ ಇಡೀ ದೇಶ ಆತಂಕಪಡುವಂತಾಗಿದೆ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ರಾಜು ಮೇಷ್ಟ್ರು75’ ನೆನಪಿನಲ್ಲಿ ‘ವರ್ತಮಾನದ ತವಕ ತಲ್ಲಣಗಳು’ ಸಂವಾದ, ಚರ್ಚೆ, ಕವಿಗೋಷ್ಠಿ, ನಾಟಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾಗತಿಕರಣದ ಪರಿಣಾಮವೂ ಮತ್ತು ಭಾರತೀಯರ ಮನಸ್ಥಿತಿಯೂ ಇಂತಹ ಬೆಳವಣಿಗೆಗೆ ಕಾರಣವಿರಬಹುದು. ಆದರೆ, ಈ ಪರಿಸ್ಥಿತಿಯ ನಡುವೆಯೂ ಹೊಸ ಪೀಳಿಗೆಯಲ್ಲಿ ವಿಶೇಷ ಜಾಗೃತಿ, ಹೋರಾಟ ನಡೆಸುವ ಛಲ ಮೂಡುತ್ತಿರುವುದು ಹಿರಿಯ ತಲೆಮಾರಿನವರಿಗೂ ಹುರುಪು ಬರುತ್ತಿದೆ’ ಎಂದರು. ಶ್ರೀನಿವಾಸರಾಜು ಅವರು ಸಾಹಿತ್ಯ ಪಾರಿಚಾರಕಷ್ಟೇ ಆಗಿರಲಿಲ್ಲ. ಅವರಲ್ಲೊಬ್ಬ ಸೃಜನಶೀಲ ಬರಹಗಾರನಿದ್ದ. ಬರೆದುದಕ್ಕಿಂತ ಪ್ರತಿಭೆ ಇರುವವರನ್ನು ಗುರುತಿಸಿ ಬರೆಸಿ, ಬೆಳೆಸಿದರು ಎಂದು ಪ್ರಶಂಸಿಸಿದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್.ವಿಶುಕುಮಾರ್‌, ‘ಇಂದಿನ ಕಲುಷಿತ ವಾತಾವರಣದಲ್ಲಿ ತುಂಬಾ ಸಂಭಾವಿತರಾಗಿರುವುದೇ ಅಪಾಯ ಎನ್ನುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ. ಇದು ಬಹಳ ಸಂಕ್ರಮಣದ ಕಾಲ. ಧ್ವನಿ ಎತ್ತಿದವರನ್ನು ಹೊಸಕಿ ಹಾಕುವ, ನಿರ್ನಾಮ ಮಾಡುವುದು ನಡೆಯುತ್ತಿದೆ. ಆದರೂ ನಾವು ಭರವಸೆ ಕಳೆದುಕೊಳ್ಳಬಾರದು. ಮೌಲ್ಯಗಳಿಗಾಗಿ ಹೋರಾಡಬೇಕು. ಮೌಲ್ಯಗಳಿಗಾಗಿ ಬದುಕಬೇಕು’ ಎಂದರು.

‘ಶ್ರೀರಾಜು ಲಿಪಿ’ ಅನಾವರಣ

ದಿವಂಗತ ಚಿ.ಶ್ರೀನಿವಾಸರಾಜು ಅವರ 75ನೇ ಜನ್ಮದಿನದ ನೆನಪಿನಾರ್ಥ ಅವರ ಕುಟುಂಬ ಕನ್ನಡ ತಂತ್ರಾಂಶಕ್ಕೆ ಪರಿಚಯಿಸುತ್ತಿರುವ ಯೂನಿಕೋಡ್‌ನಲ್ಲಿರುವ ‘ಶ್ರೀರಾಜು ಲಿಪಿ’ ಅನಾವರಣಗೊಳಿಸಲಾಯಿತು.

ಐದು ವಿನ್ಯಾಸಗಳಲ್ಲಿರುವ ಹೊಸ ಕನ್ನಡ ಲಿಪಿಗಳನ್ನು ಚಿ.ಶ್ರೀನಿವಾಸರಾಜು ಅವರ ಪತ್ನಿ ಸರಸ್ವತಿ ಬಿಡುಗಡೆ ಮಾಡಿದರು. ನಾಗಲಿಂಗಪ್ಪ ಬಡಿಗೇರ್‌ ಲಿ‍ಪಿ ರೂಪಿಸಿದ್ದಾರೆ.

‘ಒಂದೊಂದು ಲಿಪಿಗೆ ₹3ರಿಂದ ₹4 ಲಕ್ಷ ವೆಚ್ಚವಾಗಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದಿದ್ದನ್ನು ಸರಿಪಡಿಸಲಾಗುತ್ತಿದೆ. ಈ ವಾರದೊಳಗೆ ಉಚಿತ ಡೌನ್‌ಲೋಡ್‌ ಮಾಡಿಕೊಳ್ಳಲು ಲಭ್ಯವಾಗಲಿದೆ. ಡೌನ್‌ಲೋಡ್‌ ಲಿಂಕ್‌ ಅನ್ನು ‘ದಿ ಸ್ಟೇಟ್‌’ ಡಿಜಿಟಲ್‌ ಮಾಧ್ಯಮದ ವೆಬ್‌ಸೈಟ್‌ ಮತ್ತು ವಾಟ್ಸ್‌ಆ್ಯಪ್‌ ಮೂಲಕವೂ ಒದಗಿಸಲಾಗುವುದು’ ಎಂದು ಚಿ.ಶ್ರೀನಿವಾಸರಾಜು ಅವರ ಪುತ್ರ ಹಾಗೂ ಪತ್ರಕರ್ತ ಸುಗತ ಶ್ರೀನಿವಾಸರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.