ADVERTISEMENT

ಪೊಲೀಸರ ಮೇಲೆ ಹಲ್ಲೆ; ಮೂವರು ಉದ್ಯಮಿಗಳ ಸೆರೆ

ಸಿಟಿಒ ವೃತ್ತದಲ್ಲಿ ಪಾನಮತ್ತರ ದಾಂದಲೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಪೊಲೀಸರ ಮೇಲೆ ಹಲ್ಲೆ; ಮೂವರು ಉದ್ಯಮಿಗಳ ಸೆರೆ
ಪೊಲೀಸರ ಮೇಲೆ ಹಲ್ಲೆ; ಮೂವರು ಉದ್ಯಮಿಗಳ ಸೆರೆ   

ಬೆಂಗಳೂರು: ಪಾನಮತ್ತ ಚಾಲನೆ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರ ಜತೆ ವಾಗ್ವಾದ ನಡೆಸಿ, ಅವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೂವರು ರಿಯಲ್‌ ಎಸ್ಟೇಟ್ ಉದ್ಯಮಿಗಳನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

‘ಬಸವೇಶ್ವರನಗರದ ಕಿರಣ್, ಚಂದ್ರು ಹಾಗೂ ಶ್ರೀನಿವಾಸ್‌ಗೌಡ ಎಂಬುವರನ್ನು ಬಂಧಿಸಿದ್ದೇವೆ. ಲ್ಯಾವೆಲ್ಲೆ ರಸ್ತೆ ಬಳಿ ಹೋಟೆಲ್‌ನಲ್ಲಿ ಸ್ನೇಹಿತರು ಆಯೋಜಿಸಿದ್ದ ಪಾರ್ಟಿಗೆ ಬಂದಿದ್ದ ಆರೋಪಿಗಳು, ರಾತ್ರಿ 1.30ರ ಸುಮಾರಿಗೆ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಸಿಟಿಒ ವೃತ್ತದಲ್ಲಿ ಈ ಗಲಾಟೆ ನಡೆದಿದೆ. ಕಬ್ಬನ್‌ಪಾರ್ಕ್‌ ಸಂಚಾರ ಠಾಣೆಯ ಎಎಸ್‌ಐ ವೆಂಕಟೇಶ್ ಹಾಗೂ ಇಬ್ಬರು ಕಾನ್‌ಸ್ಟೆಬಲ್‌ಗಳು ಹಲ್ಲೆಯಿಂದ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ನಾವ್ಯಾರು ಗೊತ್ತೇನ್ರೋ’: ‘ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3ರವರೆಗೆ ಸಿಟಿಒ ವೃತ್ತದಲ್ಲಿ ಪಾನಮತ್ತ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ. ಅಂತೆಯೇ ಶುಕ್ರವಾರ ರಾತ್ರಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ, ಕಾರು ನಿಲ್ಲಿಸುವಂತೆ ಚಾಲಕನಿಗೆ ಸಂಜ್ಞೆ ಮಾಡಿದ್ದಾರೆ. ಆ ಸೂಚನೆಗೆ ಕ್ಯಾರೇ ಎನ್ನದ ಚಾಲಕ ಚಂದ್ರು, ವಾಹನ ಚಾಲೂ ಮಾಡಲು ಮುಂದಾಗಿದ್ದಾನೆ’ ಎಂದು ಪೊಲೀಸರು ವಿವರಿಸಿದರು.

ADVERTISEMENT

‌‘ಈ ಹಂತದಲ್ಲಿ ಕಾನ್‌ಸ್ಟೆಬಲ್‌ವೊಬ್ಬರು ಕಾರಿನ ಕೀ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಆಗ ಅವರ ಕೈ ಹಿಡಿದುಕೊಂಡ ಚಾಲಕ, ಹಾಗೆಯೇ ಸ್ವಲ್ಪ ದೂರ ಕಾರು ಓಡಿಸಿದ್ದಾನೆ. ಇದರಿಂದ ಕೆರಳಿದ ಇತರೆ ಸಿಬ್ಬಂದಿ, ವಾಹನಕ್ಕೆ ಅಡ್ಡನಿಂತು ಚಾಲಕನನ್ನು ಕೆಳಗಿಳಿಸಿದ್ದಾರೆ. ‘ನ್ಯಾವ್ಯಾರು ಗೊತ್ತೇನ್ರೋ. ನಿಮ್ಮೆಲ್ಲರನ್ನು ನಾಳೆನೇ ವರ್ಗಾವಣೆ ಮಾಡಿಸ್ತೀವಿ. ಏನ್ ಅಂದ್ಕೊಂಡಿದ್ದೀರಾ ನಮ್ಮನ್ನ’ ಎಂದು ಚಂದ್ರು ಕೂಗಾಡಿದ್ದಾನೆ. ಆಗ ಎಎಸ್‌ಐ, ‘ಸುಮ್ಮನೆ ಗಲಾಟೆ ಮಾಡಬೇಡ. ತಪಾಸಣೆಗೆ ಸಹಕರಿಸು’ ಎಂದಿದ್ದಾರೆ. ಅದಕ್ಕೆ ಒಪ್ಪದ ಚಂದ್ರು, ಆಲ್ಕೋಮೀಟರ್ ಉಪಕರಣವನ್ನು ಕಸಿದುಕೊಂಡು ಒಡೆದು ಹಾಕಿದ್ದಾನೆ.’

‘ಆ ಬಳಿಕ ಸಿಬ್ಬಂದಿ ಆತನನ್ನು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ಹಂತದಲ್ಲಿ ಸ್ನೇಹಿತನ ರಕ್ಷಣೆಗೆ ಬಂದ ಕಿರಣ್ ಹಾಗೂ ಶ್ರೀನಿವಾಸ್‌, ಪೊಲೀಸರಿಗೆ ಮುಷ್ಠಿಯಿಂದ ಗುದ್ದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗಲಾಟೆ ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಸಿಬ್ಬಂದಿ ಠಾಣೆಗೆ ಕರೆ ಮಾಡಿ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು. ಬಳಿಕ ಅವರನ್ನು ಠಾಣೆಗೆ ಕರೆದೊಯ್ಯಲಾಯಿತು.’

ನ್ಯಾಯಾಂಗ ಬಂಧನ: ‘ಎಎಸ್‌ಐ ವೆಂಕಟೇಶ್ ದೂರು ಕೊಟ್ಟಿದ್ದು, ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ (ಐಪಿಸಿ 332 ಮತ್ತು 353) ಆರೋಪದ ಮೇಲೆ ಮೂವರನ್ನೂ ಬಂಧಿಸಿದೆವು. ಶನಿವಾರ ಬೆಳಿಗ್ಗೆ ನ್ಯಾಯಾಧೀಶರ ಆದೇಶದಂತೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಪೊಲೀಸರೇ ನಿಂದಿಸಿದ್ದು’

‘ನಾವು ಕುಡಿದಿದ್ದು ನಿಜ. ಆದರೆ, ಪೊಲೀಸರ ಮೇಲೆ ಕೂಗಾಡಿಲ್ಲ. ದಂಡ ಕಟ್ಟಲು ಸಿದ್ಧರಿದ್ದೆವು. ಆದರೆ, ವಾಹನ ಕೊಡುವುದಿಲ್ಲ ಎಂದರು. ಎಷ್ಟೇ ಮನವಿ ಮಾಡಿದರೂ ಒಪ್ಪದ ಅವರು, ನಮ್ಮನ್ನು ಬೈದರು. ಆಗ ನಾವೂ ಸಿಟ್ಟಿನಲ್ಲಿ ಎದುರು ಮಾತನಾಡಿದೆವು. ಇದರಿಂದ ವಾಗ್ವಾದ ಜೋರಾಗಿ ಪರಿಸ್ಥಿತಿ ಕೈ–ಕೈ ಮಿಲಾಯಿಸುವ ಹಂತ ತಲುಪಿತು. ಈ ಹಂತದಲ್ಲಿ ಅವರಿಗೆ ಗಾಯಗಳಾದವು’ ಎಂದು ಆರೋಪಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.