ADVERTISEMENT

‘ಮೆಟ್ರೊ ಕಾಮಗಾರಿ: 175 ಮರಗಳ ಸ್ಥಳಾಂತರಕ್ಕೆ ಸೂಚನೆ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಅನಂತಕುಮಾರ್‌ ಅವರು ಗ್ರಾಹಕರಿಗೆ ವಿದ್ಯುತ್‌ ಬಿಲ್‌ನ ರಸೀದಿ ನೀಡಿದರು. ಸತೀಶ್‌ ರೆಡ್ಡಿ, ಪಾಲಿಕೆ ಸದಸ್ಯ ಮೋಹನ್‍ರಾಜು ಇದ್ದಾರೆ
ಅನಂತಕುಮಾರ್‌ ಅವರು ಗ್ರಾಹಕರಿಗೆ ವಿದ್ಯುತ್‌ ಬಿಲ್‌ನ ರಸೀದಿ ನೀಡಿದರು. ಸತೀಶ್‌ ರೆಡ್ಡಿ, ಪಾಲಿಕೆ ಸದಸ್ಯ ಮೋಹನ್‍ರಾಜು ಇದ್ದಾರೆ   

ಬೆಂಗಳೂರು: ಮೆಟ್ರೊ ಮಾರ್ಗ ನಿರ್ಮಾಣಕ್ಕಾಗಿ ಕತ್ತರಿಸಲು ಉದ್ದೇಶಿಸಿರುವ 175 ಮರಗಳನ್ನು ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ತಿಳಿಸಿದರು.

ಬೊಮ್ಮನಹಳ್ಳಿ ವಾರ್ಡ್‍ನ ದೇವರಚಿಕ್ಕನಹಳ್ಳಿಯಲ್ಲಿ ಸ್ಥಾಪಿಸಿರುವ ‘ಬೆಂಗಳೂರು ಒನ್’ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೆಟ್ರೊ ಮಾರ್ಗ ವಿಸ್ತರಣೆಗಾಗಿ ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಪರಿಸರ ನಾಶವಾಗಲಿದೆ. ಹೀಗಾಗಿ, ಮರಗಳನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಮೆಟ್ರೊ ರೈಲು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಳೇಕಹಳ್ಳಿ ವಾರ್ಡ್‌ನ ವಿವಿಧೆಡೆ 56 ಮರಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದರು.

ADVERTISEMENT

ಹಸಿರು ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಅದಮ್ಯ ಚೇತನ ಸಂಸ್ಥೆ ವತಿಯಿಂದ ನಗರದಲ್ಲಿ ಪ್ರತಿ ಭಾನುವಾರ ಹಸಿರು ದಿನವನ್ನು ಆಚರಿಸಲಾಗುತ್ತಿದೆ. ಈ ಭಾನುವಾರ 180 ಸಸಿಗಳನ್ನು ನೆಡಲಾಗಿದೆ.

‘2014ರಲ್ಲಿ ದೇಶದಲ್ಲಿ 99 ಜನೌಷಧ ಕೇಂದ್ರಗಳಿದ್ದವು. ಎನ್‌ಡಿಎ ಆಡಳಿತಕ್ಕೆ ಬಂದ ಬಳಿಕ 3,049 ಕೇಂದ್ರಗಳನ್ನು ಸ್ಥಾಪಿಸಲಾಯಿತು. ಬೇವು ಲೇಪಿತ ಯೂರಿಯಾ ಪರಿಚಯಿಸಿದಾಗ ರಾಸಾಯನಿಕ ಮಾಫಿಯಾದವರಿಂದ ಹಾಗೂ ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದಾಗ ಔಷಧ ಮಾಫಿಯಾದವರಿಂದ ಬೆದರಿಕೆ ಬಂದಿತ್ತು. ಅದಕ್ಕೆ ಜಗ್ಗದೆ, ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೇನೆ’ ಎಂದು ಹೇಳಿದರು.

ಶಾಸಕ ಸತೀಶ್‍ ರೆಡ್ಡಿ, ‘ನಗರದಲ್ಲಿರುವ ಬೆಂಗಳೂರು ಒನ್‌ ಕೇಂದ್ರಗಳ ಪೈಕಿ ಇದು ಅತ್ಯಂತ ದೊಡ್ಡದಾಗಿದೆ. ಇಲ್ಲಿ 10 ಕೌಂಟರ್‍ಗಳು ಇವೆ. ವಿದ್ಯುತ್ ಬಿಲ್, ನೀರಿನ ಬಿಲ್ ಪಾವತಿ, ರೈಲ್ವೆ ಟಿಕೆಟ್ ಬುಕ್ಕಿಂಗ್ ಸೇರಿದಂತೆ 51 ಸೇವೆಗಳು ಒಂದೇ ಸೂರಿನಡಿ ಲಭ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.