ADVERTISEMENT

ಈ ಹೊತ್ತಿನ ಲೇಖಕರಿಗೆ ಈ ಹೊತ್ತಿನ ಓದುಗರಿಲ್ಲ: ಎಚ್‌ಎಸ್‌ವಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಕಾರ್ಯಕ್ರಮದಲ್ಲಿ ಲೇಖಕರಾದ ವಸುಧೇಂದ್ರ, ಜಯಂತ ಕಾಯ್ಕಿಣಿ, ಎಚ್.ಎಸ್. ವೆಂಕಟೇಶಮೂರ್ತಿ, ಎಂ.ಎಸ್. ಶ್ರೀರಾಮ್, ನಟ ಮಂಡ್ಯ ರಮೇಶ್, ಕಿರುತೆರೆ ಕಲಾವಿದೆ ಸುಷ್ಮಾ ಭಾರದ್ವಾಜ್, ಲೇಖಕಿ ಸಂಧ್ಯಾರಾಣಿ ಮತ್ತು ರಂಗಕರ್ಮಿ ಬಿ. ಸುರೇಶ್ ಲೇಖಕ ನಾಗರಾಜ ರಾಮಸ್ವಾಮಿ ವಸ್ತಾರೆ (ಕೆಳಗೆ ಕುಳಿತಿರುವವರು) ಅವರ 8 ಪುಸ್ತಕಗಳ ಮುಖಪುಟಗಳನ್ನು ಅನಾವರಣಗೊಳಿಸಿದರು. ಅಪರ್ಣಾ ವಸ್ತಾರೆ ಇದ್ದಾರೆ. ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಲೇಖಕರಾದ ವಸುಧೇಂದ್ರ, ಜಯಂತ ಕಾಯ್ಕಿಣಿ, ಎಚ್.ಎಸ್. ವೆಂಕಟೇಶಮೂರ್ತಿ, ಎಂ.ಎಸ್. ಶ್ರೀರಾಮ್, ನಟ ಮಂಡ್ಯ ರಮೇಶ್, ಕಿರುತೆರೆ ಕಲಾವಿದೆ ಸುಷ್ಮಾ ಭಾರದ್ವಾಜ್, ಲೇಖಕಿ ಸಂಧ್ಯಾರಾಣಿ ಮತ್ತು ರಂಗಕರ್ಮಿ ಬಿ. ಸುರೇಶ್ ಲೇಖಕ ನಾಗರಾಜ ರಾಮಸ್ವಾಮಿ ವಸ್ತಾರೆ (ಕೆಳಗೆ ಕುಳಿತಿರುವವರು) ಅವರ 8 ಪುಸ್ತಕಗಳ ಮುಖಪುಟಗಳನ್ನು ಅನಾವರಣಗೊಳಿಸಿದರು. ಅಪರ್ಣಾ ವಸ್ತಾರೆ ಇದ್ದಾರೆ. ಪ್ರಜಾವಾಣಿ ಚಿತ್ರ   

ಬೆಂಗಳೂರು: ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಒಬ್ಬ ಲೇಖಕರ ಒಂದೋ, ಎರಡೋ ಪುಸ್ತಕ ಲೋಕಾರ್ಪಣೆಗೊಳ್ಳುವುದು ಸಾಮಾನ್ಯ. ಆದರೆ, ಒಬ್ಬರೇ ಲೇಖಕರ ಎಂಟು ಪುಸ್ತಕಗಳ ಅನಾವರಣ ಅಪರೂಪ. ಇಂಥದೊಂದು ವಿಶಿಷ್ಟ ಕಾರ್ಯಕ್ರಮದಲ್ಲಿ ನಾಗರಾಜ ರಾಮಸ್ವಾಮಿ ವಸ್ತಾರೆ ಅವರ ಪುಸ್ತಕಗಳು ಬಿಡುಗಡೆಯಾದವು.

ಕಥೆ, ಪ್ರಬಂಧ, ನೀಳ್ಗತೆ, ಗೂಗಲಿತ ಬರಹ – ಹೀಗೆ ಭಿನ್ನ ಬರಹಗಳ ಎಂಟು ಪುಸ್ತಕಗಳ ಮುಖಪುಟಗಳನ್ನು ಎಂಟು ಮಂದಿ ಬರಹಗಾರರು ಪ್ರದರ್ಶಿಸುವ ಮೂಲಕ ಈ ವಿಭಿನ್ನ ಕಾರ್ಯಕ್ರಮಕ್ಕೆ ಚಾಲನೆಕೊಟ್ಟರು. ಈ ಎಂಟು ಪುಸ್ತಕಗಳನ್ನು ಒಟ್ಟಿಗೆ ಹೊರತರುವ ಸಂಭ್ರಮ ‘ನಾಯಿ, ಬೆಕ್ಕುಗಳು ಮರಿಹಾಕಿದ ಹಾಗೆ’ ಎಂದು ಬಣ್ಣಿಸಿದರು ಸಾಹಿತಿ ಜಯಂತ ಕಾಯ್ಕಿಣಿ.

ಈ ಭಿನ್ನಲೋಕ ತೆರೆದುಕೊಂಡಿದ್ದು ಸಾಂಚಿಮುದ್ರೆ ಪ್ರಕಾಶನ ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ. ತಮ್ಮ ಎಂಟು ಪುಸ್ತಕಗಳನ್ನು ಒಟ್ಟಿಗೆ ಬಿಡುಗಡೆಗೊಳಿಸಿದ ಪುಳಕದಲ್ಲಿದ್ದವರು ಲೇಖಕ ವಸ್ತಾರೆ. ಕಾರ್ಯಕ್ರಮದ ನಿರೂಪಣೆಯನ್ನು ರಂಗಕರ್ಮಿ ಬಿ. ಸುರೇಶ ಅವರ ಹೆಗಲಿಗೆ ಹೊರಿಸಿ, ವಸ್ತಾರೆ ಪುಳಕದಲ್ಲಿ ಅವರ ಪತ್ನಿ ಅಪರ್ಣಾ ಭಾಗಿಯಾದರು.

ADVERTISEMENT

ಕಾರ್ಯಕ್ರಮದಲ್ಲಿ ಭಾಷಣಗಳಿಗಿಂತ ವಸ್ತಾರೆ ಪುಸ್ತಕಗಳ ಆಯ್ದ ಭಾಗಗಳ ಓದು ಸಾಹಿತ್ಯಾಸಕ್ತರ ಗಮನ ಸೆಳೆಯಿತು. ನಟ ಮಂಡ್ಯ ರಮೇಶ್, ‘ಯದುವೀರನ ಮದುವೆ’ ಕಥೆಯನ್ನು ನಾಟಕೀಯವಾಗಿ ವಾಚಿಸಿದರು. ಲೇಖಕ ಎಂ.ಎಸ್. ಶ್ರೀರಾಮ್ ವಸ್ತಾರೆ ಅವರ ಕೆಲವು ಕವಿತೆಗಳಿಗೆ ದನಿಯಾದರು. ಕಿರುತೆರೆ ಕಲಾವಿದೆ ಸುಷ್ಮಾ ಭಾರದ್ವಾಜ್ ‘ತೊಂಬತ್ತನೇ ಡಿಗ್ರಿ’ ಪುಸ್ತಕದ ಕಥೆಯೊಂದರ ಭಾಗವನ್ನು ಓದಿದರು. ಲೇಖಕಿ ಸಂಧ್ಯಾರಾಣಿ ‘ಕಮಾನು ಕಟ್ಟುಕತೆ ಕಟ್ಟುಪಾಡು’ ಪುಸ್ತಕದ ಕೆಲವು ಭಾಗಗಳನ್ನು ವಾಚಿಸಿದರು.

‘ವಸ್ತಾರೆ ಬರಹದಲ್ಲಿ ನಗರ ಮತ್ತು ಆಧುನಿಕತೆಯನ್ನು ವಿರೋಧಿಸುವಂತೆ ಕಾಣುತ್ತಾರೆ. ಆದರೆ, ನಿಜ ಜೀವನದಲ್ಲಿ ಅವರು ಅತ್ಯಂತ ಆಧುನಿಕವಾಗಿ ಬದುಕುತ್ತಿದ್ದಾರೆ. ಕೃತಿಕಾರ ಮತ್ತು ಕೃತಿಯನ್ನು ಬೇರೆಯಾಗೇ ನೋಡಬೇಕು ಎನ್ನುವುದು ಇದಕ್ಕೇ ಇರಬೇಕು’ ಎಂದವರು ವಸ್ತಾರೆ ಅವರ ಮೊದಲ ಪುಸ್ತಕಗಳನ್ನು ಪ್ರಕಟಿಸಿದ ಛಂದ ಪುಸ್ತಕದ ವಸುಧೇಂದ್ರ.

‘ನಮಗೆ ಅರ್ಥವಾಗದ ವ್ಯಕ್ತಿಯ ಬಗ್ಗೆ ಪ್ರೀತಿ ಹೆಚ್ಚು. ಹೀಗೆ ಅರ್ಥವಾಗದ ವ್ಯಕ್ತಿ ವಸ್ತಾರೆ. ಪ್ರತಿಭೆಯ ಪೊಗರು, ಶಬ್ದದ ಅಕ್ಕಸಾಲಿಗತನ ಅವರಲ್ಲಿದೆ’ ಎಂದು ಜಯಂತ ಕಾಯ್ಕಿಣಿ ನುಡಿದರು.

‘ವಸ್ತಾರೆ ಬರಹದಲ್ಲಿ ವೃತ್ತಿಯ ಅನುಭವ, ವಸ್ತು ಪ್ರಪಂಚ ರೂಪಕಗಳಾಗಿ ಬರುತ್ತವೆ. ಪ್ರಖರ ಆಧುನಿಕತೆ ಅವರ ಬರಹದಲ್ಲಿದೆ. ಈ ಹೊತ್ತಿನ ಲೇಖಕರಿಗೆ ಈ ಹೊತ್ತಿನ ಓದುಗರು ಇಲ್ಲದೇ ಇರುವುದು ದುರಂತ’ ಎಂದು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

‘ಸುಳ್ಳು ಹೇಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸತ್ಯ ಹೇಳುವವರು ಹೆಚ್ಚಾಗಬೇಕು. ವಸ್ತಾರೆ, ಬರಹದ ಮೂಲಕ ಸತ್ಯ ಹೇಳುವ ದಾರಿಯಲ್ಲಿದ್ದಾರೆ’ ಎಂದು ಬಿ. ಸುರೇಶ ನುಡಿದರು.

ಕನ್ನಡದ ಬರಹಗಾರರು ಇಡೀ ಜಗತ್ತಿನ ಓದುಗರನ್ನು ಹುಡುಕಿಕೊಳ್ಳುವ ಅಗತ್ಯ ಇಂದು ಹೆಚ್ಚಾಗಿದೆ. ಕನ್ನಡದ ಒಳ್ಳೆಯ ಪುಸ್ತಕಗಳು ಇಂಗ್ಲಿಷ್‌ಗೆ ಅನುವಾದಗೊಳ್ಳಬೇಕು
– ವಸುಧೇಂದ್ರ

ಕಲಾಸಿಪಾಳ್ಯದ ಶಬ್ದಗಳು!
‘ನಾವು ಸರಳವಾಗಿ ಬರೆದರೂ ಜನ, ‘ಶಬ್ದಗಳನ್ನು ಎಲ್ಲಿಂದ ತರುತ್ತೀರಿ’ ಎಂದು ಕೇಳುತ್ತಾರೆ. ಕಲಾಸಿಪಾಳ್ಯದಲ್ಲಿ ಒಂದು ಅಂಗಡಿಯಿದೆ, ಬೆಳಿಗ್ಗೆ ಐದೂವರೆಗೇ ಹೋಗಿ, ಅರ್ಧ ಕೆ.ಜಿ. ಮಾತ್ರ ಮಾರಾಟ ಮಾಡುತ್ತಾರೆ ಎಂದು ನಾನು ತಮಾಷೆಯಾಗಿ ಅವರಿಗೆ ಹೇಳುತ್ತೇನೆ. ಭಾಷೆ ಅನುಭವದ ಭಾಗವಾಗದಿರುವುದರ ಸಮಸ್ಯೆ ಇದು’ ಎಂದು ಜಯಂತ ಕಾಯ್ಕಿಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.