ADVERTISEMENT

ಸಿಗಂದೂರು ಚೌಡೇಶ್ವರಿ ಜಾತ್ರೆಗೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:36 IST
Last Updated 14 ಜನವರಿ 2018, 19:36 IST
ಸಿಗಂದೂರು ಚೌಡೇಶ್ವರಿ ದೇವಾಲಯದ ಮಕರಸಂಕ್ರಮಣ ಜಾತ್ರೆಯಲ್ಲಿ ದೇವಿಯ ಮೂಲನೆಲೆ ಸೀಗೆ ಕಣಿವೆಯಿಂದ ಧರ್ಮ ಜ್ಯೋತಿಯನ್ನು ಮೆರವಣಿಗೆಯ ಮೂಲಕ ಈಗಿನ ದೇವಾಲಯಕ್ಕೆ ತರಲಾಯಿತು.
ಸಿಗಂದೂರು ಚೌಡೇಶ್ವರಿ ದೇವಾಲಯದ ಮಕರಸಂಕ್ರಮಣ ಜಾತ್ರೆಯಲ್ಲಿ ದೇವಿಯ ಮೂಲನೆಲೆ ಸೀಗೆ ಕಣಿವೆಯಿಂದ ಧರ್ಮ ಜ್ಯೋತಿಯನ್ನು ಮೆರವಣಿಗೆಯ ಮೂಲಕ ಈಗಿನ ದೇವಾಲಯಕ್ಕೆ ತರಲಾಯಿತು.   

ತುಮರಿ (ತಾ. ಸಾಗರ): ಸಿಗಂದೂರು ಚೌಡೇಶ್ವರಿ ದೇವಾಲಯದ ಮಕರಸಂಕ್ರಮಣ ಜಾತ್ರೆ ಭಾನುವಾರ ಬೆಳಗಿನಜಾವ ಶ್ರದ್ಧಾ ಭಕ್ತಿಯಿಂದ ಆರಂಭವಾಯಿತು.

ಜಾತ್ರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇವಿಯ ಮೂಲನೆಲೆ ಸೀಗೆಕಣಿವೆಯಿಂದ ಧರ್ಮ ಜ್ಯೋತಿಯನ್ನು 5 ಕಿ.ಮೀ ಅದ್ದೂರಿ ಮೆರವಣಿಗೆ ಮೂಲಕ ಈಗಿನ ದೇವಸ್ಥಾನಕ್ಕೆ ತರಲಾಯಿತು. ಪೂರ್ಣಕುಂಭ ಕಳಶದೊಂದಿಗೆ ಮಹಿಳೆಯರು ಜ್ಯೋತಿ ಸ್ವಾಗತಿಸಿದರು. ಹತ್ತಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

ಧರ್ಮದರ್ಶಿ ರಾಮಪ್ಪ ಅವರ ಸಮ್ಮುಖದಲ್ಲಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಸಂಕ್ರಮಣದ ವಿಶೇಷ ಪೂಜೆ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯದ ಮುಂಭಾಗದಲ್ಲಿ ಬೆಳಿಗ್ಗೆ ಧರ್ಮ ಧ್ವಜಾರೋಹಣವನ್ನು ರಾಮಪ್ಪ ನೆರವೇರಿಸಿದರು. ನಂತರ ದೇವಾಲಯದಿಂದ 5 ಕಿ.ಮೀ ದೂರದ ಶರಾವತಿ ನದಿ ದಡಕ್ಕೆ ತೆರಳಿ ಪೂಜಾ ಕಾರ್ಯ ನೆರವೇರಿಸಲಾಯಿತು.

ADVERTISEMENT

ಈ ಸಮಯದಲ್ಲಿ ಮಾತನಾಡಿದ ಧರ್ಮದರ್ಶಿ ರಾಮಪ್ಪ, ‘ಚೌಡೇಶ್ವರಿದೇವಿ ಮೂಲತಃ ಶರಾವತಿ ನದಿ ತೀರದ ಸೀಗೆ ಕಣಿವೆಯ ವನದೇವತೆ. ಶರಾವತಿ ಮುಳುಗಡೆಯ ಕಾರಣಕ್ಕೆ ತನ್ನ ಮೂಲ ಬನವ ಕಳೆದುಕೊಂಡು ಬದಲಾದ ಕಾಲಗಟ್ಟದಲ್ಲಿ ಈ ನಾಡಿನ ಜನದೇವತೆಯಾಗಿ ನೆಲೆ ನಿಂತಿದ್ದಾಳೆ. ಈ ನೆನಪಿನ ಭಾಗವಾಗಿ ಮೂಲನೆಲದಿಂದ ಧರ್ಮಜ್ಯೋತಿ ತರುವ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ’ ಎಂದು ವಿವರಿಸಿದರು.

‘ಜನರ ಕಷ್ಟ ನಷ್ಟಗಳನ್ನು ಬಗೆಹರಿಸುವ ಶಕ್ತಿ ದೇವತೆಯಾದ ಚೌಡೇಶ್ವರಿಯ ಭಕ್ತರು ರಾಜ್ಯದ ಎಲ್ಲೆಡೆ ಇದ್ದಾರೆ. ದೇವಾಲಯದ ಅಭಿವೃದ್ಧಿಗೆ ಜನರ ಸಹಕಾರ ಕಾರಣ. ಎಲ್ಲಾ ಸರ್ಕಾರಗಳೂ ದೇವಸ್ಥಾನದ ಅಭಿವೃದ್ಧಿಗೆ, ಕಾರ್ಯಗಳಿಗೆ ಸ್ಪಂದಿಸಿವೆ. ದೇವಾಲಯದ ಸೇವಾ ವಲಯ ಹೆಚ್ಚಾಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಹರಾತಾಳು ಹಾಲಪ್ಪ, ಗೋಪಾಲಕೃಷ್ಣ ಬೇಳೂರು, ತುಮರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ಸಿಗಂದೂರು ಟ್ರಸ್ಟ್ ರವಿಸಿಗಂದೂರು, ಬೀರಪ್ಪ, ಹುರುಳಿಹೂವಣ್ಣ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಾಗೋಡು ಅಣ್ಣಪ್ಪ, ಕಲಗೋಡು ರತ್ನಾಕರ, ಮುಖಂಡ ಹರೀಶ್‌ ಗಂಟೆ ದೇವಸ್ಥಾನಕ್ಕೆ ಬಂದಿದ್ದರು.

ಮೊದಲ ದಿನದ ಜಾತ್ರೆಗೆ ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತರು ಬಂದು ದೇವಿ ದರ್ಶನ ಪಡೆದರು. ಮಧ್ಯಾಹ್ನ ಪ್ರಸಾದಕ್ಕೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.