ADVERTISEMENT

ಬನ್ನೇರುಘಟ್ಟ ರಸ್ತೆ 155 ಅಡಿಗೆ ವಿಸ್ತರಣೆ

ಎನ್.ನವೀನ್ ಕುಮಾರ್
Published 15 ಜನವರಿ 2018, 19:55 IST
Last Updated 15 ಜನವರಿ 2018, 19:55 IST
ಬನ್ನೇರುಘಟ್ಟ ರಸ್ತೆಯ ಜೇಡಿ ಮರದ ಜಂಕ್ಷನ್‌ ಬಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ -ಪ್ರಜಾವಾಣಿ ಚಿತ್ರ/ ರಂಜು ಪಿ.
ಬನ್ನೇರುಘಟ್ಟ ರಸ್ತೆಯ ಜೇಡಿ ಮರದ ಜಂಕ್ಷನ್‌ ಬಳಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ -ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ಸದಾ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗ ಕೈಗೆತ್ತಿಕೊಂಡಿದೆ.

ಜೇಡಿ ಮರ ಜಂಕ್ಷನ್‌ನಿಂದ ಕೋಳಿ ಫಾರಂ ಗೇಟ್‌ವರೆಗೆ ರಸ್ತೆ ವಿಸ್ತರಿಸಲಾಗುತ್ತಿದ್ದು, ಇದರ ಗುತ್ತಿಗೆಯನ್ನು ಆರ್‌.ಕೆ. ಇನ್ಫ್ರಾ ಪ್ರೈವೇಟ್‌ ಲಿಮಿಟೆಡ್‌ಗೆ ನೀಡಲಾಗಿದೆ. ಸೆಪ್ಟೆಂಬರ್‌ 1ರಂದು ಕಾರ್ಯಾದೇಶ ನೀಡಿದ್ದು, ನವೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ರಸ್ತೆಯು ಸದ್ಯ 80ರಿಂದ 90 ಅಡಿ ಇದ್ದು, ಇದನ್ನು 155 ಅಡಿಗೆ ವಿಸ್ತರಣೆ ಮಾಡಲಾಗುತ್ತದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.

ಜೇಡಿ ಮರ ಜಂಕ್ಷನ್‌ ಬಳಿ 400 ಮೀಟರ್‌, ಮೀನಾಕ್ಷಿ ಮಾಲ್‌ ಬಳಿ 500 ಮೀಟರ್‌ ಹಾಗೂ ನೈಸ್‌ ರಸ್ತೆ ಬಳಿ 400 ಮೀಟರ್‌ ಉದ್ದದ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ.

ADVERTISEMENT

ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯನ್ನು ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಮೂಲಕ ಸ್ವಾಧೀನಪಡಿಸಲು ಉದ್ದೇಶಿಸಲಾಗಿದೆ. ಕೆಲವರು ಟಿಡಿಆರ್‌ ಪಡೆಯಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಅಲ್ಲದೆ, ಸರ್ಕಾರಿ ಹಾಗೂ ಕಂದಾಯ ಇಲಾಖೆಗೆ ಸೇರಿದ ಶೇ 30ರಷ್ಟು ಜಾಗವಿದೆ. ಈಗ ಲಭ್ಯವಿರುವ ಜಾಗದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 60ರಷ್ಟು ಭೂಮಿಯನ್ನು ಸಾರ್ವಜನಿಕರಿಂದ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಈ ಭೂಮಿಗೆ ಟಿಡಿಆರ್‌ ಕೊಡಬೇಕೇ ಅಥವಾ ಪರಿಹಾರ ನೀಡಬೇಕೇ ಎಂಬುದರ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಜನರು ಸ್ವಯಂಪ್ರೇರಿತರಾಗಿ ಭೂಮಿಯನ್ನು ನೀಡಿದರೆ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದರು.

ಮೆಟ್ರೊ ಕಾಮಗಾರಿ:

‘ನಮ್ಮ ಮೆಟ್ರೊ’ ಯೋಜನೆಯ 2ನೇ ಹಂತದ ಕಾಮಗಾರಿ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯವರೆಗೆ ನಡೆಯಲಿದೆ. ಜೇಡಿ ಮರ ಜಂಕ್ಷನ್‌ನಿಂದ ಗೊಟ್ಟಿಗೆರೆಯವರೆಗೆ 4 ಕಿ.ಮೀ. ಉದ್ದವಿದ್ದು, ಮಾರ್ಗ ನಿರ್ಮಾಣಕ್ಕಾಗಿ ರಸ್ತೆಯ ಮಧ್ಯೆ 4 ಮೀಟರ್‌ ಜಾಗವನ್ನು ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್‌ಸಿಎಲ್‌) ಸ್ವಾಧೀನ ಪಡಿಸಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಪಾಲಿಕೆಗೆ ಹಸ್ತಾಂತರಿಸಲಿದ್ದಾರೆ. ಜತೆಗೆ, ಜೆ.ಪಿ.ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಹಾಗೂ ಗೊಟ್ಟಿಗೆರೆ ಮೆಟ್ರೊ ನಿಲ್ದಾಣಗಳು ಬರಲಿದ್ದು, ಈ ಭಾಗದಲ್ಲಿ ರಸ್ತೆ ನಿರ್ಮಾಣದ ಹೊಣೆಯನ್ನು ಬಿಎಂಆರ್‌ಸಿಎಲ್‌ ನೋಡಿಕೊಳ್ಳಲಿದೆ.

‘ಬನ್ನೇರುಘಟ್ಟ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಹನ ದಟ್ಟಣೆ ಸಮಸ್ಯೆ ಇರುತ್ತದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಜಂಕ್ಷನ್‌ನಿಂದ ಹುಳಿಮಾವುವರೆಗೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ರಸ್ತೆ ವಿಸ್ತರಣೆಯಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಕಾರ್ಮಿಕ ಎನ್‌.ನಾಗರಾಜ್‌ ಒತ್ತಾಯಿಸಿದರು.

‘ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ವಾರಾಂತ್ಯದಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಹೀಗಾಗಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಕಂಡುಬರುತ್ತದೆ. ರಸ್ತೆ ವಿಸ್ತರಣೆ ಅನಿವಾರ್ಯವಿತ್ತು’ ಎಂದು ಮಂಜುನಾಥ್‌ ತಿಳಿಸಿದರು.

ಅಂಕಿ–ಅಂಶ

7.40 ಕಿ.ಮೀ. -ಜೇಡಿ ಮರ ಜಂಕ್ಷನ್‌ನಿಂದ ಕೋಳಿ ಫಾರಂ ಗೇಟ್‌ವರೆಗೆ ಇರುವ ದೂರ

₹ 134 ಕೋಟಿ- ರಸ್ತೆ ವಿಸ್ತರಣೆಯ ವೆಚ್ಚ

ರಸ್ತೆಯ ವಿಶೇಷತೆಗಳು

ಟೆಂಡರ್‌ ಶ್ಯೂರ್‌ ರಸ್ತೆ ಮಾದರಿಯಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಒಂದು ಪಥದಲ್ಲಿ 11 ಮೀಟರ್‌ ಮುಖ್ಯರಸ್ತೆ, 1.2 ಮೀಟರ್‌ ಉದ್ದದ ರಾಜಕಾಲುವೆ, 5.5 ಮೀಟರ್‌ ಉದ್ದದ ಸರ್ವಿಸ್‌ ರಸ್ತೆ ಹಾಗೂ 3 ಮೀಟರ್‌ ಪಾದಚಾರಿ ಮಾರ್ಗ ಬರುತ್ತದೆ. ಪಾದಚಾರಿ ಮಾರ್ಗದಲ್ಲಿ ಕುಡಿಯುವ ನೀರಿನ ಹಾಗೂ ಕೊಳಚೆ ನೀರಿನ ಕೊಳವೆಗಳು, ಅನಿಲ ಕೊಳವೆ, ಒಎಫ್‌ಸಿಗೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮತ್ತೊಂದು ಪಥವನ್ನೂ ನಿರ್ಮಿಸಲಾಗುತ್ತದೆ.

ಜಲಮಂಡಳಿ, ಬೆಸ್ಕಾಂ ಹಾಗೂ ಒಎಫ್‌ಸಿಯವರು ರಸ್ತೆ ಅಗೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ. ಮಳೆ ನೀರು ಸರಾಗವಾಗಿ ಕಾಲುವೆಗೆ ಹರಿದು ಹೋಗುವುದರಿಂದ ರಸ್ತೆಯಲ್ಲಿ ಗುಂಡಿ ಬೀಳುವುದು ಕಡಿಮೆ ಆಗಲಿದೆ. ಕಾಲುವೆಯಲ್ಲಿ ಹೂಳು ತುಂಬಿಕೊಂಡರೆ ಸುಲಭವಾಗಿ ತೆರವುಗೊಳಿಸಲು ಸಾಧ್ಯವಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಸೋಮಶೇಖರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.